ಬೆಂಗಳೂರು,ಡಿ.24- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದ್ದು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ರಮೇಶ್ ಜಾರಕಿಹೊಳಿ ಆಪ್ತ ಬಣದ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನದ ರಾಜೀನಾಮೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ಬೇಕಾಗಿದ್ದು, ನಾಲ್ಕು ದಿನಗಳ ಕಾಲಾವಕಾಶ ಕೊಡಿ.ಆನಂತರ ಮಾಧ್ಯಮಗಳ ಮುಂದೆ ಎಲ್ಲ ವಿಚಾರವನ್ನು ಬಹಿರಂಗಪಡಿಸಲಾಗುವುದು ಎಂದರು.
ಕಳೆದೊಂದು ವಾರದಲ್ಲಿ ಕೆಲವರನ್ನು ಹೀರೋ ಮಾಡಲಾಗಿದೆ.ಮತ್ತೆ ಕೆಲವರನ್ನು ವಿಲನ್ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳು ಪ್ರಚೋದಿಸುವುದು ಬೇಡ.ಆಧಾರರಹಿತ ಮಾಹಿತಿ ನೀಡುವುದು ಬೇಡ.ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸದಿರಲು ತಮ್ಮದೇ ಆದ ಕಾರಣವಿದೆ. ತಮ್ಮೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಎಂಬುದನ್ನು ನಿಮಗೇಕೆ ಹೇಳಬೇಕು ಎಂದು ಖಾರವಾಗಿ ಮಾಧ್ಯಮದವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗುವುದಿಲ್ಲ. ಹಾಗೆ ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಖಾಸಗಿ ವಾಹನದಲ್ಲಿ ರಹಸ್ಯ ಸ್ಥಳಕ್ಕೆ ತೆರಳಿದ ಅವರು, ತಮ್ಮ ಆಪ್ತ ಬಣದ ಶಾಸಕರೊಂದಿಗೆ ಮುಂದಿನ ರಾಜಕೀಯ ನಡೆ ಕುರಿತಂತೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಸೇರಿದಂತೆ ಸುಮಾರು10 ಮಂದಿ ಶಾಸಕರು ತಮ್ಮೊಂದಿಗಿರುವುದಾಗಿ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದಿಂದ ಮೊದಲ ವಿಕೆಟ್ ಪತನವಾಗಲಿದೆಯೇ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದ್ದು, ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರದಲ್ಲಿ ಕೈಗೊಳ್ಳುವ ನಿರ್ಧಾರದಿಂದ ಎದ್ದಿರುವ ಊಹಾಪೊಹಗಳಿಗೂ ತೆರೆ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕು.