ಬೆಂಗಳೂರು,ಡಿ.24-ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದ್ದು, ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಂಡ ಸಿದ್ಧವಾಗಿದೆ.
12 ಗಂಟೆ ಆಗುತ್ತಿದ್ದಂತೆ 70 ಸಾವಿರಕ್ಕೂ ಹೆಚ್ಚು ಮಂದಿ ಬ್ರಿಗೇಡ್ ರಸ್ತೆ ಬಳಿ ಆಗಮಿಸುತ್ತಾರೆ. ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಈ ಹಿನ್ನೆಲೆ, ಈಗಾಗಲೇ ಎಲ್ಲಾ ಡಿಸಿಪಿಗಳ ಜೊತೆ ಚರ್ಚೆ ನಡೆಸಿ ಬೆಂಗಳೂರಿನಾದ್ಯಂತ ಎಲ್ಲಾ ಜಾಗಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಹೈ ಅಲರ್ಟ್ ನೀಡಿ ಪಬ್, ಬಾರ್ ರೆಸ್ಟೋರೆಂಟ್ ಮೇಲೆ ನಿಗಾ ಇಟ್ಟಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಜನರು ಪಬ್, ರೆಸ್ಟೋರೆಂಟ್, ಯುಬಿಸಿಟಿ ,ಕಬ್ಬನ್ ಪಾರ್ಕ್ ರಸ್ತೆ, ಶಿವಾಜಿನಗರ, ಬ್ರಿಗೆಡ್ ರಸ್ತೆ , ಎಂಜಿ ರಸ್ತೆಯಲ್ಲಿ ಹೆಚ್ಚಾಗಿ ಸೇರುವುದರಿಂದ ಈ ಸ್ಥಳಗಳ ಮೇಲೆ ಪೊಲೀಸರು ಹೆಚ್ಚು ನಿಗಾ ಇಟ್ಟಿದ್ದಾರೆ. ಡ್ರಗ್ಸ್ ಹಂಚಿಕೆ, ವೇಶ್ಯಾವಾಟಿಕೆ, ಅಹಿತಕರ ಘಟನೆ ತಡೆಯಲು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ವಿದೇಶಗಳಲ್ಲಿ ಒಂದು ಜಾಗದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಹೊಸ ವರ್ಷ ಆಚರಿಸುವ ಪದ್ದತಿ ಇದೆ.ಈ ಪದ್ದತಿಯನ್ನು ಬೆಂಗಳೂರಿಗೂ ತರುವಲ್ಲಿ ಪೊಲೀಸರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಪತ್ರದ ಮುಖೇನ ಮನವಿ ಮಾಡಲು ಪೊಲೀಸ್ ಇಲಾಖೆ ಯೊಚಿಸಿದ್ದು, ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟಲ್ಲಿ ಅರಮನೆ ಮೈದಾನದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.