ತುಮಕೂರು, ಫೆ.12- ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದ ಘಟನೆ ಮಾಸುವ ಮುನ್ನವೇ ಕರಡಿಯೊಂದು ಗೋಡೌನ್ ಒಳಗೆ ಸೇರಿಕೊಂಡು ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು , ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಸಿಕ್ಕಿದೆ.
ಶಿರಾ ತಾಲ್ಲೂಕಿನ ಗುಂಡಪ್ಪ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಗ್ರಾಮಸ್ಥರು ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಓಂಕಾರೇಶ್ವರ ಎಂಬುವರ ತೆಂಗಿನ ತೋಟದಲ್ಲಿರುವ ಗೋಡೌನ್ ಒಳಗೆ ನುಗ್ಗಿ ಅಡಗಿ ಕುಳಿತಿತ್ತು.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬಾಗಿಲಿನಲ್ಲಿ ಬೋನ್ ಇಟ್ಟು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪಟಾಕಿ ಸಿಡಿಸಿ ಮತ್ತು ಬೆಂಕಿ ಹಚ್ಚಿ ಕರಡಿಯನ್ನು ಹೊರ ಬರುವಂತೆ ಮಾಡಿದ ಪರಿಣಾಮ ಗಾಬರಿಗೊಂಡ ಕರಡಿ ಬಾಗಿಲಿನ ಮುಖಾಂತರ ಹೊರ ಬರುತ್ತಿದ್ದಾಗ ಬಾಗಿಲಿನ ಬಳಿಯೇ ಇಟ್ಟಿದ್ದ ಬೋನಿನೊಳಗೆ ಸೆರೆಯಾಗಿದ್ದು, ಗ್ರಾಮಸ್ಥರು ಹಾಗೂ ಮನೆಯವರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ಫೋಟೋ ಕ್ರೆಡಿಟ್: nationalgeographic.com(ಪ್ರಾತಿನಿಧ್ಯಕ್ಕಾಗಿ)