ಬೆಂಗಳೂರು,ಡಿ.23- ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತವಾಗಿ ಸಾಹಿತ್ಯ ಪುಸ್ತಕಗಳನ್ನು ಹಂಚಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಒತ್ತಾಯಿಸಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಬರಹಗಾರರು, ಪುಸ್ತಕಗಳು ಹಾಗೂ ಪ್ರಕಾಶಕರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಅಧಿಕೃತ ಸಂಸ್ಥೆಯಾದ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಬಹುಮುಖ್ಯವಾಗಿ ಸಾಹಿತ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಪ್ರಾಧಿಕಾರಕ್ಕೆ ನೀಡುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಹಂಚುವ ಕುರಿತು ಶಿಕ್ಷಣ ಸಚಿವರನ್ನು ಹಾಗೂ ಸರ್ಕಾರವನ್ನು ಒತ್ತಾಯಿಸಲು ಪ್ರಕಾಶಕರು ಮುಂದಾದರೆ ನಾನು ನಿಮ್ಮ ಜತೆಗಿರುತ್ತೇನೆ ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಮಾತನಾಡಿ, ಕನ್ನಡ ಬರಹಗಾರರು ಮತ್ತು ಪ್ರಕಾಶಕರು ಕನ್ನಡ ಸಾಹಿತ್ಯಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಚಂದ್ರಶೇಖರ್ ಕಂಬಾರರು ಹೇಳಿರುವಂತೆ ಸರ್ಕಾರವು ಇದರ ಕಡೆ ಗಮನಹರಿಸಬೇಕೆಂದು ಅವರು ಒತ್ತಾಯಿಸಿದರು.
ಡಾ.ನಾ .ಮೊಗಸಾಲೆ ಅವರಿಗೆ ವರ್ಷದ ಲೇಖಕ, ಅಭಿನವ ಪ್ರಕಾಶನದ ನ.ರವಿಕುಮಾರ್ ಅವರಿಗೆ ಕಣ್ವ -ವರ್ಷದ ಪ್ರಕಾಶಕ ಪ್ರಶಸ್ತಿ ಹಾಗೂ ಬಾಗಲಕೋಟೆಯ ಆನಂದ ಈ ಕುಂಚನೂರು ಅವರಿಗೆ ವರ್ಷದ ಯುವ ಲೇಖಕ ಪ್ರಶಸ್ತಿ ನೀಡಲಾಯಿತು.
ಡಾ.ಚನ್ನಪ್ಪಗೋಳ ಅವರ ಕನ್ನಡ ಸಾಹಿತ್ಯ-ವೈವಿಧ್ಯತೆ ಮತ್ತು ಅನನ್ಯತೆ, ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಹಳ್ಳಿಹೈದನ ವಿದೇಶ ಪ್ರವಾಸ ಕೃತಿ ಸೇರಿದಂತೆ ವಿವಿಧ ಲೇಖಕರ 10 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಸೃಷ್ಟಿ ನಾಗೇಶ್, ಬರಹಗಾರ ಡಾ.ಶರಣು ಹುಲ್ಲೂರು ಉಪಸ್ಥಿತರಿದ್ದರು.