ರೈತರು ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಂಬಂಧಿತ ಬ್ಯಾಂಕುಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಮನವಿ

ಬೆಂಗಳೂರು, ಡಿ.22-ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರು ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಂಬಂಧಿತ ಬ್ಯಾಂಕ್ ಶಾಖೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಜನವರಿ 10 ರೊಳಗೆ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ ಎಂ ವಿಜಯಶಂಕರ್ ಮನವಿ ಮಾಡಿದ್ದಾರೆ.

ಸುಸ್ತಿ ಸಾಲ, ಪುನರಾವರ್ತಿ ಸಾಲ, ಅನುತ್ಪಾದಕ ಆಸ್ತಿ ಸಾಲಗಳನ್ನು ಒಳಗೊಂಡಂತೆ 2009 ರ ಏಪ್ರಿಲ 1 ರಿಂದ 2017 ರ ಡಿಸೆಂಬರ್ 31 ರವರೆಗೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬಾಕಿ ಇರುವ ರೈತರ ಬೆಳೆ ಸಾಲಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದಕಾರಣ ರೈತರು ಸ್ವಯಂ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಪ್ರಸಕ್ತ ಸಾಲಿನ ಜುಲೈ 5 ರೊಳಗೆ ಪಡೆದ ತಮ್ಮ ಪಡಿತರ ಚೀಟಿಯ ನಕಲು ಪ್ರತಿ ಹಾಗೂ ಸಾಲ ಪಡೆದ ಜಮೀನಿನ ಸರ್ವೇಕ್ಷಣಾ ಸಂಖ್ಯೆಯ ಮಾಹಿತಿಯನ್ನು ಬ್ಯಾಂಕ್‍ಗೆ ಸಲ್ಲಿಸಿ ಹೆಸರು ನೋಂದಾಯಿಸಬೇಕೆಂದು ತಿಳಿಸಿದ್ದಾರೆ.

ರೈತರಿಗೆ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ಗಳನ್ನು ನೀಡಿ ನೋಂದಣಿಗೆ ಅನುವುಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪ್ರತಿ ಬ್ಯಾಂಕ್ ಶಾಖೆಯಲ್ಲಿ ರೈತರ ನೆರವಿಗಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯೋಜಿಸಲಾಗಿದೆ. ಅರ್ಹ ಮತ್ತು ಆಸಕ್ತ ರೈತರು ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 080 – 2221 1106 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ