ಡಿ.27ರಂದು ಮೇಕೆ ದಾಟು ಮತ್ತು ಮಹದಾಯಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ದೆಹಲಿಯ ಗಾಂಧಿ ಪ್ರತಿಮೆ ಮುಂದೆ ರಾಜ್ಯ ಸರ್ವಪಕ್ಷ ಸಂಸದರ ಪ್ರತಿಭಟನೆ

ನವದೆಹಲಿ,ಡಿ.20: ಮೇಕೆ ದಾಟು ಹಾಗೂ ಮಹದಾಯಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಡಿ.27ರಂದು ನವದೆಹಲಿಯ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲು ರಾಜ್ಯ ಸರ್ವಪಕ್ಷ ಸಂಸದರು ನಿರ್ಧರಿಸಿದ್ದಾರೆ.

ಇಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ನಿವಾಸದಲ್ಲಿ ಸರ್ವಪಕ್ಷ ಸಂಸದರ ಸಭೆ ನಡೆಯಿತು.

ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ, ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್ , ಡಿ.ಕೆ.ಶಿವಕುಮಾರ್, ಅನಂತಕುಮಾರ ಹೆಗಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಕ್ಯಾತೆ ತೆಗೆಯುತ್ತಿದ್ದು, ಇತ್ತೀಚೆಗೆ ದೆಹಲಿಯ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ಸಹ ನಡೆಸಿತ್ತು.
ತಮಿಳುನಾಡು ಕ್ಯಾತೆ ತಕ್ಕ ಉತ್ತರ ನೀಡಲು ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ತಾವೂ ಕೂಡ ಪ್ರತಿಭಟನೆಯ ಹಾದಿ ಹಿಡಿಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಅಂತೆಯೇ ಮಹದಾಯಿ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತಂತೆಯೂ ಸಭೆಯಲ್ಲಿ ಸಾದ್ಯಂತವಾಗಿ ಚರ್ಚೆ ನಡೆಯಿತು.

ಸಭೆ ಬಳಿಕ ಮಾತನಾಡಿದ ಡಿ.ವಿ.ಸದಾನಂದ ಗೌಡ, ತಮಿಳುನಾಡು ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ಸದನದ ಒಳಗೂ-ಹೊರಗೂ ಕೋಲಾಹಲ ಸೃಷ್ಠಿಸುತ್ತಿದೆ. ಇದಕ್ಕೆ ಪ್ರತಿಯಾಗಿ ನಾವೂ ಕೂಡಾ ಪಕ್ಷ ಬೇಧ ಮರೆತು ಒಗ್ಗಟ್ಟಿನ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.

ಈಗಾಗಲೇ ಕೇಂದ್ರ ಮೇಕೆದಾಟು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಮತ್ತೊಮ್ಮೆ ಪ್ರಧಾನಿಯವರನ್ನು ಭೇಟಿ ಮಾಡುವ ಪ್ರಮೇಯವಿಲ್ಲ ಎಂದು ಹೇಳಿದರು.
ಇನ್ನು ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ