ಮಂಗಳೂರು, ಫೆ.12- ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲ್ಲೂಕಿನ ಕಸಬಾ ಗ್ರಾಮದ ಮಲ್ಲಹಳ್ಳಿ ನಿವಾಸಿ ನವೀನ್ (28) ಕೊಲೆಯಾದ ನತದೃಷ್ಟ.
ಮಂಜುನಾಥ್ ಎಂಬುವರಿಗೆ ರಾಘವೇಂದ್ರ ಮತ್ತು ನವೀನ್ ಎಂಬ ಇಬ್ಬರು ಗಂಡು ಮಕ್ಕಳ ಪೈಕಿ ನವೀನ್ ಕುಡಿತದ ಚಟ ಹೊಂದಿದ್ದರಿಂದ ಆಗಾಗ್ಗೆ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಕಳೆದ ಒಂದು ವಾರದ ಹಿಂದೆ ನವೀನ್ ಕುಡಿದು ಬಂದು ತಂದೆ ಹಾಗೂ ಅಣ್ಣನೊಂದಿಗೆ ಜಗಳವಾಡಿದ್ದನು. ಅಂದು ನೆರೆ ಹೊರೆಯವರು ರಾಜಿ ಸಂಧಾನದ ಮೂಲಕ ಅಪ್ಪ -ಮಗನನ್ನು ಸಮಾಧಾನ ಪಡಿಸಿದ್ದರು.
ನಿನ್ನೆ ಮತ್ತೆ ಕುಡಿದು ಬಂದ ನವೀನ್ ತಂದೆಯೊಂದಿಗೆ ಜಗಳವಾಡಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಒಡೆದು ಹಾಕಿದ್ದಾನೆ.
ಮೊದಲೇ ಮಗನ ವರ್ತನೆಯಿಂದ ರೋಸಿ ಹೋಗಿದ್ದ ತಂದೆ ಹಾಗೂ ಸಹೋದರ ರಾಘವೇಂದ್ರ ಅವರ ತಾಳ್ಮೆಯ ಕಟ್ಟೆ ಒಡೆದು ಚಾಕುವಿನಿಂದ ನವೀನನನ್ನು ಇರಿದು ಕೊಲೆ ಮಾಡಿದ್ದಾರೆ. ಘಟನೆ ಬಳಿಕ ತಂದೆ ಮಂಜುನಾಥ ಸ್ಥಳದಿಂದ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಬೆಳ್ತಂಗಡಿ ಠಾಣೆ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.