ಬೆಳಗಾವಿ, ಡಿ.20-ಬೆಳಗಾವಿ ಸುವರ್ಣಸೌಧದಲ್ಲಿನ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಫಲಪ್ರದವಾಗಿ ನಡೆಯಲಿಲ್ಲ. ಆದರೆ ಬರಪರಿಸ್ಥಿತಿ ಬಗ್ಗೆ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಉತ್ತರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರನ್ನು ನೆನಪಿಸುವಂತಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಹಲವು ಕೋಟಿ ರೂ.ಗಳ ಹರಣವಾಯಿತೇ ಹೊರತು ಯಾವ ಹೂರಣವೂ ಹೊರಬರಲಿಲ್ಲ. ವಿರೋಧ ಪಕ್ಷದ ಅಸಹಕಾರದಿಂದಾಗಿ ಗುಣಾತ್ಮಕ ಚರ್ಚೆಗಳು ನಡೆಯದೆ ನೀರಸ ಅಧಿವೇಶನ ನಡೆದಿದೆ.ದೂರ-ದೂರದಿಂದ ಬಂದಂತಹ ಶಾಸಕರೇ ಸಮಾಧಾನಗೊಳ್ಳದ ರೀತಿಯಲ್ಲಿ ಕಲಾಪ ನಡೆದಿದೆ ಎಂದರು.
ರಾಜ್ಯದ ಅಭಿವೃದ್ದಿ ಬಗ್ಗೆ ಆಸಕ್ತಿದಾಯಕವಾದ ಚರ್ಚೆಗಳು ನಡೆಯಬೇಕಿತ್ತು. ಅಂತಹ ಚರ್ಚೆ ನಡೆಯಲಿಲ್ಲ ಎಂಬ ಬೇಸರವಿದೆ.ಇದರ ನಡುವೆ ಬರ ಪರಿಸ್ಥಿತಿ ಬಗ್ಗೆ ವಿಸ್ತೃತ ಚರ್ಚೆಯೂ ನಡೆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹಳ ಸಹನೆಯಿಂದ ಅಧ್ಯಯನ ಪೂರ್ಣ ಉತ್ತರ ನೀಡಿದರು. ಇದು 1970ರ ದಶಕದಲ್ಲಿನ ದೇವರಾಜ ಅರಸು ಅವರ ಅವಧಿಯನ್ನು ನೆನಪಿಸುವಂತೆ ಇತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳಿಗೆ ಸಾಲಮನ್ನಾ ಒಂದೇ ಪರಿಹಾರವಲ್ಲ. ಅಲ್ಲದೆ ಅದೊಂದೇ ಸಮಸ್ಯೆ ರೈತರನ್ನು ಬಾಧಿಸುತ್ತಿಲ್ಲ. ಸಾಲದ ಸಮಸ್ಯೆಯೊಂದಿಗೆ ರೈತ ಸಮುದಾಯ ಹಲವಾರು ಸಮಸ್ಯೆಗಳಲ್ಲಿ ಸಿಲುಕಿದೆ. ಇನ್ನು ಹಲವಾರು ರೈತರಿಗೆ ಭೂಮಿಯ ಹಕ್ಕಿನ ಒಡೆತನ ಸಿಕ್ಕಿಲ್ಲ. ಬಹಳಷ್ಟು ಮಂದಿಗೆ ಪಹಣಿ, ಖಾತೆ, ಫೋಡಿ ದೊರೆತಿಲ್ಲ. ಇಂತಹ ಜಟಿಲ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ರೈತಪರ ಸಂಘಟನೆಗಳು ತಲೆ ಕೆಡಿಸಿಕೊಂಡಿಲ್ಲ ಎಂದರು.
ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಗೊಬ್ಬರ ಸಿಗುತ್ತಿಲ್ಲ.ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇಲ್ಲದಂತಾಗಿದೆ. ಇಂತಹ ಹಲವಾರು ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯಬೇಕು. ಸಾಲಮನ್ನಾ ಒಂದರಿಂದಲೇ ಹಸನಾಗದು.ಅವರ ಹಲವು ಸಮಸ್ಯೆಗಳು ಪರಿಹಾರವಾಗಬೇಕಿದೆ ಎಂದರು.