ಬೆಳಗಾವಿ,ಡಿ.20-ನೈಸ್ ಸಂಸ್ಥೆಯ ರಸ್ತೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದನ ಸಮಿತಿ ನೀಡಿರುವ ವರದಿ ಕುರಿತು ಚರ್ಚೆ ನಡೆಸಲು ಹಾಗೂ ತನಿಖೆಗೂ ಸರ್ಕಾರ ಸಿದ್ದವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆಯೊಂದಿಗೆ ಸರ್ಕಾರ ಶಾಮೀಲಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ.ನೈಸ್ ಸಂಸ್ಥೆಯ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದರು.
ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೈಸ್ ಸಂಸ್ಥೆಯ ರಸ್ತೆ ಯೋಜನೆಯಲ್ಲಿ ದೊಡ್ಡ ಹಗರಣದ ಬಗ್ಗೆ ವರದಿಗೆ ಆಗಿನ ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿ ನೀಡಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿಲಾಗಿತ್ತು.ಈ ವರದಿಯ ಬಗ್ಗೆ ಚರ್ಚೆ ಮಾಡಲು ಅವಕಾಶ ಕೋರಿದ್ದರೂ ನಮಗೆ ಅವಕಾಶ ಸಿಗಲಿಲ್ಲ. ರಾಜ್ಯ ಸರ್ಕಾರ ನೈಸ್ ಸಂಸ್ಥೆ ಕುರಿತಂತೆ ಚರ್ಚೆಗೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಜೆಡಿಎಸ್ ಹೋರಾಟ ಮಾಡಿತ್ತು.ಆದರೆ ಈಗ ತಣ್ಣಗಾಗಿದೆ ಎಂದು ಅಶೋಕ್ ಟೀಕಿಸಿದರು.
ಸದನ ಸಮಿತಿ ವರದಿಯಲ್ಲಿ ನೈಸ್ ರಸ್ತೆಯ ಟೋಲ್ ನಿಲ್ಲಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂಬ ಶಿಫಾರಸು ಇದ್ದರೂ ಈವರೆಗೂ ಸಮ್ಮಿಶ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಸರ್ವಾನುಮತದಿಂದ ಸದನ ಸಮಿತಿ ರಚಿಸಲಾಗಿತ್ತು.ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ಸುಮಾರು 29 ಸಭೆಗಳನ್ನು ನಡೆಸಿ 20 ಸಾವಿರ ಕೋಟಿ ರೂ.ಲಾಭ ಪಡೆದಿದೆ ಎಂದು ಅಭಿಪ್ರಾಯಪಟ್ಟಿತ್ತು.ಅಲ್ಲದೆ ನೈಸ್ ಸಂಸ್ಥೆಯ ಅವ್ಯವಹಾರದ ಆರೋಪದ ಬಗ್ಗೆ ಸಿಬಿಐನಂತಹ ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿತ್ತು.
ನೈಸ್ ಯೋಜನೆ ವಿರುದ್ಧ ಜೆಡಿಎಸ್ ಹೋರಾಟ ಮಾಡುತ್ತಾ ಬಂದಿತ್ತು.ಅದೇ ಪಕ್ಷದವರೇ ಆದ ಕುಮಾರಸ್ವಾಮಿಯವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಈ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದರು.
ಸುಪ್ರೀಂಕೋರ್ಟ್‍ನಲ್ಲಿ ನೈಸ್‍ಗೆ ಸಂಬಂಧಿಸಿದ ಪ್ರಕರಣ ವಿಚಾರಣೆ ಹಂತದಲ್ಲಿದೆ.ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಅವರು ಸಲ್ಲಿಸಿರುವ ಪ್ರಮಾಣ ಪತ್ರ ನೈಸ್ ಪರವಾಗಿದೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಮೊರೆ ಹೋಗಿರುವವರು ಹೆಚ್ಚುವರಿಯಾಗಿ ಒಂದು ಟೌನ್‍ಶಿಪ್ ಹಾಗೂ ಭೂಮಿ ನೀಡಿರುವುದರ ಬಗ್ಗೆ ಆಕ್ಷೇಪಿಸಿದ್ದಾರೆ.ಅಲ್ಲದೆ ಲೀಸ್ ಅವಧಿ ಮುಗಿದ ಸರ್ಕಾರಿ ಜಮೀನನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದು ದೂರಿದರು.
ರೈತ ಪರ ಹೋರಾಟ ಮಾಡಿದ ಜೆಡಿಎಸ್ ಈಗ ರೈತ ವಿರೋಧಿ ನಿಲುವನ್ನು ತಳೆಯುತ್ತಿದೆ ಎಂದು ಟೀಕಿಸಿದರು.
ನೈಸ್ ಸಂಸ್ಥೆ ಜೊತೆ ಶಾಮೀಲಾಗಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.ಬಹಳಷ್ಟು ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ನಿವೇಶನವೂ ಸಿಕ್ಕಿಲ್ಲ. ಸಂಸ್ಥೆಯಿಂದ ಉದ್ಯೋಗವೂ ಸಿಕ್ಕಿಲ್ಲ ಎಂದು ಆರೋಪಿಸಿದರು.
ನಿತ್ಯವೂ ನೈಸ್ ಸಂಸ್ಥೆ ರಸ್ತೆ ಟೋಲ್‍ನಿಂದ ಸುಮಾರು ಒಂದು ಕೋಟಿ ರೂ.ಸಂಗ್ರಹ ಮಾಡುತ್ತಿದೆ.ಕಾಂಕ್ರೀಟ್ ರಸ್ತೆ ನಿರ್ಮಿಸದೆ ಟೋಲ್ ಸಂಗ್ರಹಿಸುವಂತಿಲ್ಲ. ಆದರೂ ಕೋಟ್ಯಂತರ ರೂ.ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದರು.
ನೈಸ್ ಸಂಸ್ಥೆಯ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡುವುದಾಗಿ ಆರ್.ಅಶೋಕ್ ಎಚ್ಚರಿಸಿದರು.