ಬಿಜೆಪಿ ನಾಯಕರು ಆಯೋಜಿಸಿದ್ಧ ಔತಣಕೂಟದಲ್ಲಿ ಭಾಗಿಯಾದ ಕಾಂಗ್ರೇಸ್ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ,ಡಿ.20- ಬಿಜೆಪಿ ನಾಯಕರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿರುವ ಕಾಂಗ್ರೆಸ್‍ನ ಸಚಿವ ರಮೇಶ್ ಜಾರಕಿಹೊಳಿ ತಾವು ಪಕ್ಷ ತೊರೆದು ಬಿಜೆಪಿ ಸೇರಲು ಸಿದ್ಧವಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಔತಣ ಕೂಟಕ್ಕೆ ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯ ಯಾವುದೇ ನಾಯಕರು ಆಹ್ವಾನಿಸಿರಲಿಲ್ಲ. ಇದ್ದಕ್ಕಿದ್ದಂತೆ ಔತಣಕೂಟದಲ್ಲಿ ಪ್ರತ್ಯಕ್ಷರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಭೇಟಿಗೆ ಯಾವುದೇ ರೀತಿಯ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆಯಾದರೂ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಿದರೆ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ರಮೇಶ್ ಜಾರಕಿಹೊಳಿಯ ಈ ನಡೆ ದೋಸ್ತಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಮೊದಲೇ ಸರ್ಕಾರಕ್ಕೆ ಅಸ್ಥಿರತೆಯ ಭೀತಿ ಕಾಡುತ್ತಿದೆ.ಯಾವ ಸಂದರ್ಭದಲ್ಲಾದರೂ ಭಿನ್ನಮತೀಯ ಶಾಸಕರು ಸರ್ಕಾರಕ್ಕೆ ಕೈ ಕೊಡಬಹುದೆಂಬ ಆತಂಕವೂ ಇದೆ.ಬೆಳಗಾವಿ ರಾಜಕಾರಣದಲ್ಲಿ ತಮ್ಮ ರಾಜಕೀಯ ಕಡುವೈರಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡದಂತೆ ಈ ಹಿಂದೆಯೂ ಜಾರಕಿಹೊಳಿ ಸಹೋದರರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.ಆದರೆ ಇತ್ತೀಚೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರ ವಿರುದ್ಧ್ದ ಮಾತನಾಡುತ್ತಿರುವುದರ ಹಿಂದೆ ಡಿ.ಕೆ.ಶಿ ಕುಮ್ಮಕ್ಕು ಇದೆ ಎಂಬ ಅನುಮಾನ ಕಂಡುಬಂದಿದೆ.

ಮೊದಲ ದಿನದಿಂದಲೂ ಕಾಂಗ್ರೆಸ್‍ನಲ್ಲಿ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಅದಕ್ಕೆ ಗೈರಾಗಿ ಬಿಜೆಪಿಯ ಔತಣಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ಬಿಡಲು ಮಾನಸಿಕವಾಗಿ ಸಿದ್ದನಾಗುತ್ತಿದ್ದೇನೆ. ನನಗೆ ಇನ್ನು ಮುಂದೆ ಪಕ್ಷದಲ್ಲಿ ಮುಂದುವರೆಯಬೇಕೆಂಬ ಇಚ್ಚೆಯಿಲ್ಲ. ಹೀಗಾಗಿ ಪಕ್ಷ ಬಿಡಲು ಸಿದ್ದನಾಗಿದ್ದೇನೆ ಎಂದು ಹೇಳಿದ್ದಾರೆ.ಸರ್ಕಾರದಲ್ಲಿರುವ ಪ್ರಭಾವಿ ಸಚಿವರೊಬ್ಬರು ಆಡಳಿತದ ಎಲ್ಲಾ ಕ್ಷೇತ್ರದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ.ಅವರ ಪ್ರಭಾವ ಜಿಲ್ಲಾ ರಾಜಕಾರಣಕ್ಕೂ ಕಾಲಿಟ್ಟಿದೆ.ನನಗೆ ಕಾಂಗ್ರೆಸ್‍ನಲ್ಲಿ ಹೆಚ್ಚು ದಿನಗಳ ಕಾಲ ಮುಂದುವರೆಯಲು ಆಗುವುದಿಲ್ಲ. ನನ್ನಿಂದ ಸರ್ಕಾರಕ್ಕೆ ಅಪಾಯವಿಲ್ಲ. ಇನ್ನು ಸರ್ಕಾರಕ್ಕೆ ಅಪಾಯವಿದ್ದರೆ ಅದು ನಿಮ್ಮ ಆಪ್ತರಿಂದಲೇ ಹೊರತು ನನ್ನ ಕಡೆಯಿಂದಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿರುವುದಾಗಿ ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ