ಬೆಳಗಾವಿ: ರೈತರ ಸಾಲ ಮನ್ನಾದ ಕಾಲಾವಧಿ ಬಗ್ಗೆ ಸ್ಪಷ್ಟ ಉತ್ತರ ಹೇಳಬೇಕು ಮತ್ತು ಯಡಿಯೂರಪ್ಪ ಅವರ ಕುರಿತು ಅಪಮಾನಕಾರಿಯಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿಯವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಶಾಸಕರು ನಿನ್ನೆಯಿಂದ ಆರಂಭಿಸಿರುವ ಧರಣಿಯನ್ನು ಇಂದೂ ಕೂಡ ಮುಂದುವರಿಸಿದ್ದರಿಂದ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ವಾತಾವರಣ ನಿರ್ಮಾಣಗೊಂಡು ಕಲಾಪ ಅರ್ಧಗಂಟೆ ಕಾಲ ಮುಂದೂಡಲಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನದ ಭಾವಿಗಿಳಿದ ಬಿಜೆಪಿ ಶಾಸಕರು, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಸಾಲ ಮನ್ನಾ ಮಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಲಾರಂಭಿಸಿದರು.
ಸಭಾಧ್ಯಕ್ಷರು ಆಗಮನಿಸಿ ಅಧಿವೇಶನ ಆರಂಭಗೊಂಡಾಗ ಬಿಜೆಪಿ ಧರಣಿ ಮುಂದುವರೆದಿತ್ತು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ನ ಶಾಸಕರು ಎದ್ದುನಿಂತು ಬಿಜೆಪಿ ಶಾಸಕರ ನಡವಳಿಕೆಗಳನ್ನು ಲೇವಡಿ ಮಾಡಲಾರಂಭಿಸಿದರು. ಇದರಿಂದ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಚಿವರಾದ ಆರ್.ವಿ.ದೇಶಪಾಂಡೆ, ವೆಂಕಟರಾವ್ ನಾಡಗೌಡ ಅವರು, ಸರ್ಕಾರ ಸಾಲ ಮನ್ನಾ ಮಾಡಿದೆ, ಕೇಂದ್ರ ಸರ್ಕಾರ ಒಂದು ರೂ.ನೂ ಮನ್ನಾ ಮಾಡಿಲ್ಲ. ಅಧಿವೇಶನ ನಡೆಯಲು ಅವಕಾಶ ನೀಡಿ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕಿದೆ ಎಂದು ಮನವಿ ಮಾಡಿದರು.
ಬಿಜೆಪಿ ಶಾಸಕರನ್ನು ಸಮಾಧಾನಪಡಿಸಿದ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬರ ಪರಿಸ್ಥಿತಿ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿ ನೀಡಿದ ಉತ್ತರ ಸಮಪರ್ಕವಾಗಿಲ್ಲ. ಅದು ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಸಭಾಧ್ಯಕ್ಷರು ಉತ್ತರ ಪೂರ್ಣಗೊಂಡಿದೆ ಎಂದು ಭಾವಿಸದಂತಿದೆ. ಇಂದಿನ ಅಜೆಂಡಾದಲ್ಲಿ ಉತ್ತರ ನೀಡುವ ಪ್ರಕ್ರಿಯೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮಗೆ ಕೆಲವು ಪ್ರಶ್ನೆಗಳು ಕಾಡುತ್ತಿವೆ. ಸರ್ಕಾರ ಸಾಲ ಮನ್ನಾವನ್ನು ಘೋಷಿಸಿದೆ. ನಿಗದಿತವಾಗಿ ಯಾವ ದಿನಾಂಕದಂದು ಋಣಮುಕ್ತ ಪತ್ರ ನೀಡುತ್ತದೆ ಎಂಬುದನ್ನು ತಿಳಿಸಬೇಕು. ಋಣಮುಕ್ತಗೊಳ್ಳುವವರೆಗೂ ಎದುರಾಗುವ ಸುಸ್ತಿಯನ್ನು ಯಾರು ಭರಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಅವರ ಬಗ್ಗೆ ಮುಖ್ಯಮಂತ್ರಿಯವರು ನೀಡಿದ ಹೇಳಿಕೆ ಸರಿಯೋ, ತಪ್ರೋ ಎಂಬುದನ್ನು ಸಭಾಧ್ಯಕ್ಷರು ತೀರ್ಮಾನಿಸಿ ನಿರ್ಣಯ ಕೈಗೊಳ್ಳಬೇಕು ಎಂದರು.
ಬಿಜೆಪಿ ಸಂಸದೀಯ ನಡವಳಿಕೆಗಳ ಮೇಲೆ ನಂಬಿಕೆ ಇಟ್ಟಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಿ ಪರಿಹಾರ ದೊರಕಿಸಬಹುದು. ಆ ಮೂಲಕ ತಾವು ಆಯ್ಕೆಗೊಂಡಿದ್ದಕ್ಕೂ ಸಾರ್ಥಕತೆ ಕಂಡುಕೊಳ್ಳಬಹುದು ಎಂದು ಈ ಭಾಗದ ಶಾಸಕರು ಆಸೆ ಇಟ್ಟುಕೊಂಡಿದ್ದಾರೆ. ಆದರೆ, ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿ ಗದ್ದಲವಾಗುವಂತೆ ಮಾಡಿ ಅಧಿವೇಶನವನ್ನು ಮೊಟಕುಗೊಳಿಸಿ ಹೋಗುವುದು ಸರಿಯಲ್ಲ. ಯಾರದೋ ಮರ್ಜಿಗೆ ರಾಹುಕಾಲ, ಗುಳಿಕಕಾಲ ಎಂದು ನೋಡಿಕೊಂಡು ಕಲಾಪ ನಡೆಸುವುದು ಸರಿಯಲ್ಲ ಎಂದು ಹರಿಹಾಯ್ದರು.
ಅದಕ್ಕೆ ದ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು, ಕಲಾಪ ಸುಸೂತ್ರವಾಗಿ ನಡೆಸಲು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಸಂಪೂರ್ಣ ಸಹಕಾರ ನೀಡಿದೆ. ಆಡಳಿತ ಪಕ್ಷದ ಶಾಸಕರ ಸಂಖ್ಯೆ ಕಡಿಮೆ ಇದ್ದರೂ ಹಣಕಾಸು ಮಸೂದೆಗಳನ್ನು ಮತಕ್ಕೆ ಹಾಕದೆ ಅಂಗೀಕರಿಸಿಕೊಂಡಿದ್ದೇವೆ. ಅದು ಮುಗಿದಿದೆ ಎಂದು ಸಭಾಧ್ಯಕ್ಷರು ಯಾವ ಆಧಾರದ ಮೇಲೆ ನಿರ್ಣಯಕ್ಕೆ ಬಂದರೋ ಗೊತ್ತಿಲ್ಲ. ಕಳೆದ ಆರು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಸಾಧನೆ ಏನು ? ೩೭೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೪೫ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೇವಲ ೫೦ ಕೋಟಿ ಬಿಡುಗಡೆ ಮಾಡಲಾಗಿದೆ. ಸಹಕಾರ ಸಂಘಗಳ ಸ್ಥಿತಿ ಕೇಳುವಂತಿಲ್ಲ. ಸಾಲ ಮನ್ನಾದ ಬಾಕಿ ಬಾಪ್ತನ್ನು ನಾಲ್ಕು ವರ್ಷಗಳಲ್ಲಿ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಇದಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಒಪ್ಪಿಕೊಂಡಿವೆಯೇ ಎಂದು ಪ್ರಶ್ನಿಸಿದರಲ್ಲದೆ, ಮಹಾರಾಷ್ಟ್ರ, ಉತ್ತರಪ್ರದೇಶ ಸರ್ಕಾರಗಳು ಒಂದೇ ಕಂತಿನಲ್ಲಿ ಸಾಲ ಮನ್ನದ ಹಣ ಬಿಡುಗಡೆ ಮಾಡಿದೆ ಎಂದರು.
ಪ್ರತಿಪಕ್ಷದ ನಾಯಕನಾಗಿ ನಾನು ರಾಷ್ಟ್ರೀಕೃತ ಬ್ಯಾಂಕಗಳ ಮುಖ್ಯಸ್ಥರ ಜತೆ ಮಾತನಾಡುವ ಸ್ವಾತಂತ್ರ್ಯ ಹೊಂದಿದ್ದೇನೆ. ಆದರೆ, ಅದನ್ನೇ ನೆಪವಾಗಿಟ್ಟುಕೊಂಡು ಸಾಲ ಮನ್ನಾಕ್ಕೆ ನಾನು ಅಡ್ಡಿಪಡಿಸುತ್ತಿದ್ದೇನೆ ಎಂಬರ್ಥದಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿ ಅಪಪಾನ ಮಾಡಿದ್ದು ಸರಿಯಲ್ಲ. ಇದಕ್ಕಾಗಿ ಕ್ಷಮೆ ಕೇಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಆರ್ಬಿಐನ ನಿಯಂತ್ರಣದಲ್ಲಿವೆಯೇ ಹೊರತು ನಮ್ಮ ಮಾತು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯವರು ಬರ ಪೀಡಿತ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿಲ್ಲ. ಬದಲಾಗಿ ಭತ್ತ ನಾಟಿ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ. ತೊಗರಿ ಬೇಳೆ ಬೆಲೆ ಕುಸಿದಿದೆ. ಕೇಂದ್ರ ಸರ್ಕಾರ ೫೭೫೦ರೂ. ಬೆಂಬಲ ಬೆಲೆ ನೀಡಿದೆ. ಕಳೆದ ವರ್ಷ ಪ್ರತಿ ರೈತರಿಂದ ೨೦ಕ್ವಿಂಟಾಲ್ ಖರೀದಿ ಮಾಡಲಾಗಿದ್ದು, ಈ ಬಾರಿ ಎಷ್ಟು ಖರೀದಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದರು.
ಯಡಿಯೂರಪ್ಪ ಮಾತುಮುಂದುವರೆಸಿದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ಕುಮಾರ್ ಅವರು, ನಿಮ್ಮ ಸದಸ್ಯರನ್ನು ಸಭಾಧ್ಯಕ್ಷರ ಮುಂದಿನ ಬಾವಿಯಲ್ಲಿ ಧರಣಿ ಮಾಡುವುದನ್ನು ಬಿಟ್ಟು ಕಲಾಪ ಕ್ರಮಬದ್ಧವಾಗಿಲ್ಲದ ಹೊತ್ತಿನಲ್ಲಿ ನೀವು ಮಾತನಾಡುವುದು ಸರಿಯಲ್ಲ. ನೀವು ಹಿರಿಯರಿದ್ದೀರಿ, ಅನುಭವವಿದೆ ಎಂದರಲ್ಲದೆ, ಸಿಎಂ ಉತ್ತರ ಪೂರ್ಣಗೊಂಡಿದೆ ಎಂದು ನಾನು ಭಾವಿಸಿಲ್ಲ. ನಿನ್ನೆ ತಾರಾತುರಿಯಲ್ಲಿ ಕಲಾಪದ ಅಜೆಂಡಾವನ್ನು ತಂದಿದ್ದರು. ನಾನು ಗಮನಿಸಲಿಲ್ಲ ಸಹಿ ಹಾಕಿದ್ದೇನೆ. ಇದು ಸಣ್ಣ ಮಟ್ಟದ ಅಚಾತುರ್ಯ. ಅಧಿವೇಶನ ಸುಸೂತ್ರವಾಗಿ ನಡೆದರೆ ಎಲ್ಲವೂ ಸರಿಯೋಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸೇರಿದಂತೆ ಇಲ್ಲಿ ಯಾರೇ ಮಾತನಾಡಿದರೂ ಅದನ್ನು ನಿಯಂತ್ರಿಸುವ ಅಧಿಕಾರ ನನಗಿಲ್ಲ. ಅಸಂಸದೀಯ ಪದಗಳನ್ನು ಮಾತನಾಡಿದಾಗ ಮಾತ್ರ ಕಡತದಿಂದ ತೆಗೆಯುವ ಅಧಿಕಾರ ಇದೆ. ಮುಖ್ಯಮಂತ್ರಿಯವರ ಹೇಳಿಕೆಗೆ ನೀವು ಇದೇ ವೇದಿಕೆಯನ್ನು ಬಳಸಿಕೊಂಡು ಉತ್ತರ ನೀಡುವ ಅವಕಾಶ ಇತ್ತು. ಆದರೆ, ಆತುರ ಬಿದ್ದು ಧರಣಿ ಆರಂಭಿಸಿದ್ದೀರಿ ಎಂದು ಸಭಾಧ್ಯಕ್ಷರು ಹೇಳಿದರು.
ಇದಕ್ಕಿದ್ದಾಗೆ ಬಿಜೆಪಿ ಶಾಸಕರು ಮತ್ತೆ ಧಿಕ್ಕಾರ ಕೂಗಲು ಆರಂಭಿಸಿದರು. ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಅರ್ಧಗಂಟೆ ಮುಂದೂಡಿದರು.