ಕೋಲ್ಕತ್ತಾ : ರಾಹುಲ್ ಗಾಂಧಿ ಮುಂದಿನ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಹೇಳಿಕೆ ನೀಡಿದ್ದರು. ಅಲ್ಲದೇ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಕೂಡ ರಾಹುಲ್ ಗಾಂಧಿ ಅವರೇ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷರ ಈ ಕನಸಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಣ್ಣೀರು ಎರಚಿದ್ದಾರೆ.
ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ವಿರುದ್ಧ ಮಹಾಮೈತ್ರಿ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಈ ಬಗ್ಗೆ ತೀರ್ಮಾನ ಮಾಡಲು ಇದು ಸರಿಯಾದ ಸಮಯ ಕೂಡ ಅಲ್ಲ. ಚುನಾವಣೆ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಮತಾ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ನಾವು ವಿಜೇತರು ಎಂದು ಘೋಷಣೆಯಾದ ಬಳಿಕ ಮಹಾಮೈತ್ರಿಯ ಎಲ್ಲ ಪಕ್ಷಗಳು ಸಭೆ ನಡೆಸಿ, ನಿರ್ಧಾರ ಮಾಡೋಣ. ಆಗ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ತಿಳಿಸೋಣ ಎಂದಿದ್ದಾರೆ.
ಇನ್ನು ಈ ಪ್ರಧಾನಿ ಹುದ್ದೆ ಮೇಲೆ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಕೂಡ ಕಣ್ಣೀಟ್ಟಿದ್ದಾರೆ ಎಂಬುದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯವಲ್ಲ. ಇಲ್ಲಿ ನಾನು ಒಬ್ಬಳೆ ಕಾರ್ಯನಿರ್ವಹಿಸುತ್ತಿಲ್ಲ. ನಾವು ಒಟ್ಟಾಗಿದ್ದೇವೆ. ಒಟ್ಟಾಗಿಯೇ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.
ಕಾಂಗ್ರೆಸ್ ನಿಂದ ದೂರಾಗಿ ಬಿಎಸ್ಪಿ, ಎಸ್ಪಿ ಒಟ್ಟಾಗಿ 2019ರ ಚುನಾವಣೆ ಎದುರಿಸಲು ಸಜ್ಜಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಒಳ್ಳೆಯ ಬೆಳವಣಿಗೆ. ಇದನ್ನು ನಾವು ಗೌರವಿಸಬೇಕು. ಪ್ರಾದೇಶಿಕ ಪಕ್ಷದ ಹೊರತಾಗಿ ಕಾಂಗ್ರೆಸ್ ಕೆಲವು ಕಡೆ ಏಕಾಂಗಿಯಾಗಿ ಕಣಕ್ಕೆ ಇಳಿಯಲಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲ ತೃತೀಯ ರಂಗ ಪಕ್ಷಗಳು ಒಟ್ಟುಗೂಡಿದ್ದರು. ಇದರಲ್ಲಿ ಆಗಾಗ್ಗೆ ಅಪಸ್ವರ ಮೂಡುತ್ತಲೆ ಇದೆ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯ ಎಂದು ಕೂಡ ಪ್ರಾದೇಶಿಕ ಪಕ್ಷಗಳು ಹಲವು ಬಾರಿ ಬಹಿರಂಗವಾಗಿ ತಿಳಿಸಿದೆ. ಇನ್ನು ಪ್ರಧಾನಿ ಆಯ್ಕೆ ವಿಚಾರದಲ್ಲಿಯಂತೂ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳಲು ಮಮತಾ ಸಿದ್ದ ಇಲ್ಲ ಎಂಬುದನ್ನು ಕೂಡ ಹಲವು ಬಾರಿ ತಮ್ಮ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಇವರಿಬ್ಬರಲ್ಲೂ ಶೀತಲ ಸಮರ ಮುಂದುವರೆದಿದೆ