ಸಚಿವ ರಮೇಶ್​ ಜಾರಕಿಹೊಳಿ ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವೇನು? ಸಿದ್ದರಾಮಯ್ಯ ಮುಂದೆ ಹೇಳಿದ್ದೇನು?

ಬೆಳಗಾವಿ: ಚಳಿಗಾಲ ಅಧಿವೇಶನದ ನಡೆಯುತ್ತಿರುವ ವೇಳೆ ಬಿಜೆಪಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದಲ್ಲಿ ಆಪರೇಷನ್​ ಕಮಲ ಮತ್ತೆ ಆರಂಭವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಈಗ ರಮೇಶ್​ ಜಾರಕಿಹೊಳಿ ಅವರೇ ತಾವು ಔತಣಕೂಟಕ್ಕೆ ಹೋಗಿದ್ದರ ಉದ್ದೇಶವನ್ನು ಸಿದ್ದರಾಮಯ್ಯ ಅವರ ಮುಂದೆ ಹೇಳಿದ್ದಾರೆ.

ನಗರದ ಸರ್ಕೀಟ್​ ಹೌಸ್​ನಲ್ಲಿ ಇಂದು ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ ಜಾರಕಿಹೊಳಿಗೆ ಪಕ್ಷ ತೊರೆಯದಂತೆ ಮಾಜಿ ಸಿಎಂ ಮನವಿ ಮಾಡಿದರು. ಈ ವೇಳೆ ತಾವು ಬಿಜೆಪಿ ಔತಣಕೂಟಕ್ಕೆ ಏಕೆ ಹೋದೆವು ಎಂದು ಸತೀಶ್ ಅವರು ಸಿದ್ದರಾಮಯ್ಯ ಮುಂದೆ ಹೇಳಿದ್ದಾರೆ.

ನಮ್ಮ ಜಿಲ್ಲೆಯವರಾದ ಮಹಾಂತೇಶ್ ಕವಟಗಿಮಠ್ ಎಲ್ಲರನ್ನೂ ಕರೆದಿದ್ರು, ಹಾಗೆ ಹೋಗಿದ್ದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ತಂತ್ರಗಾರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಪಕ್ಷದ ವಿರುದ್ಧ ಮುನಿಸು ತೋರಿರುವ ರಮೇಶ್​ ಮುಂಬೈನಲ್ಲಿ ರೆಸಾರ್ಟ್​ ರಾಜಕಾರಣಕ್ಕೆ ಮುಂದಾಗಿದ್ದರು ಕೂಡ. ಬೆಳಗಾವಿ ಜಿಲ್ಲೆಗೆ ಡಿಕೆ ಶಿವಕುಮಾರ್​ ಹಸ್ತಕ್ಷೇಪ, ಪಕ್ಷದಲ್ಲಿ ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ವಿರುದ್ಧ ಆಂತರಿಕ ಬಂಡಾಯ ಸಾರಿದ್ದಾರೆ. ಈಗ ಅವರು ಬಿಜೆಪಿ ನಾಯಕರ ಪಾಳಯದಲ್ಲಿ ಕಾಣಿಸಿಕೊಂಡಿರುವುದು ಹಿರಿಯ ಮುಖಂಡರಲ್ಲಿ ಆತಂಕ ಸೃಷ್ಟಿಸಿದೆ.

ಇದೇ ವೇಳೆ ಬಳ್ಳಾರಿಯ ಶಾಸಕ ನಾಗೇಂದ್ರ ಹಾಗೂ ಜಯಮಾಲಾ ಅವರನ್ನು ಕೂಡ ಬಿಜೆಪಿ ಔತಣಕೂಟಕ್ಕೆ ಕರೆದಿದ್ದು, ಇವರೊಂದಿಗೆ ಕೂಡ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು.

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಜಯಮಾಲಾ ಕೈ ತಪ್ಪಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಅವರಿಗೆ ಗಾಳ ಹಾಕಿದೆ ಎಂಬ ಮಾತು ಕೇಳಿ ಬರುತ್ತಿದೆ. ಜಯಮಾಲ ಕೂಡ ಬಿಜೆಪಿ ಔತಣಕೂಟದಲ್ಲಿ ಭಾಗಿಯಾಗಿದ್ದರು. ಆದರೆ ನಾನು ಔತಣಕ್ಕೂ ಕೂಟಕ್ಕೆ ಹೋಗಿದ್ದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಮುಂದೆ ಜಯಮಾಲ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ