ಮಹನೀಯರ ಜಯಂತಿಗಳನ್ನು ಆಚರಿಸಿ, ಅದರೆ ರಜೆ ನೀಡುವುದು ಬೇಡ, ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್

ಬೆಳಗಾವಿ(ಸುವರ್ಣಸೌಧ), ಡಿ.19-ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಅವರ ಸಾಧನೆಗಳ ಜಾಗೃತಿ ಮೂಡಿಸಿ.ಆದರೆ ರಜೆ ನೀಡುವುದು ಬೇಡ ಎಂದು ವಿಧಾನಪರಿಷತ್ ಸದಸ್ಯ ಲೆಹರ್‍ಸಿಂಗ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮಹಾವೀರ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ ಸೇರಿದಂತೆ ಹಲವು ಜಯಂತಿಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.ಆದರೆ ಆಯಾ ಶ್ರೇಷ್ಠ ವ್ಯಕ್ತಿಗಳ ಸಂಸ್ಮರಣೆಯಲ್ಲಿ ಸರ್ಕಾರದ ವತಿಯಿಂದ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಗುತ್ತಿದೆಯೇ ಹೊರತು ಜನರ ಕಡೆಯಿಂದ ಅರ್ಥಪೂರ್ಣವಾಗಿ ಗೌರವಾದರಗಳನ್ನು ಸಲ್ಲಿಸಲಾಗುತ್ತಿಲ್ಲ.

ಬಹಳಷ್ಟು ಜನರಿಗೆ ಆ ಸಾಧಕ ಶ್ರೇಷ್ಠರ ಸಾಧನೆ, ತ್ಯಾಗ, ಸಮಾಜಕ್ಕೆ ಅವರ ಕೊಡುಗೆ, ಇತಿಹಾಸದಲ್ಲಿ ಅವರ ಮಹತ್ವಪೂರ್ಣ ಸ್ಥಾನಮಾನಗಳು ತಿಳಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಡವರಿಗೆ, ಜನಸಾಮಾನ್ಯರಿಗೆ ತ್ರಾಸದಾಯಕ ಎನಿಸುವ ಈ ರಜೆಗಳನ್ನು ಸರ್ಕಾರ ಹಿಂಪಡೆದು ಬದಲಿಗೆ ಸರ್ಕಾರಿ ಇಲಾಖೆ, ಶಾಲಾ ಕಾಲೇಜುಗಳಲ್ಲಿ ಆ ಮಹಾನ್ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವಂತಹ ನಾನಾ ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸಬೇಕು. ಇದು ಕರ್ನಾಟಕದ ಮಹಾನ್ ಸಾಧಕ ಶ್ರೇಷ್ಟರಿಗೆ ಸಲ್ಲಿಸಬಹುದಾದ ಸಾರ್ಥಕ ಗೌರವವಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ