ಬೆಳಗಾವಿ(ಸುವರ್ಣಸೌಧ), ಡಿ.19-ಬೆಂಗಳೂರಿನಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆಸ್ತಿಯನ್ನು ಸಂರಕ್ಷಣೆ ಮಾಡಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಸಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಧರ್ಮರಾಯಸ್ವಾಮಿ ದೇವಾಲಯದ ಜಮೀನನ್ನು ಭೂಕಬಳಿಕೆ ಮಾಡಿದ್ದರೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ತಪ್ಪಿತಸ್ಥರ ವಿರುದ್ಧ್ದ ಕಾನೂನು ಕ್ರಮಕೈಗೊಳ್ಳಲಾಗುವುದು. ಇದೇ ರೀತಿ ರಾಜ್ಯದಲ್ಲಿರುವ ಎಲ್ಲಾ ದೇವಾಲಯಗಳ ಆಸ್ತಿಯನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಹಿಂದೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿರುವ ಸಂಬಂಧ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು.ಸರ್ಕಾರ ಈ ವರದಿ ಆಧಾರದ ಮೇಲೆ ಅನೇಕ ಕಾನೂನು ಕ್ರಮಗಳನ್ನು ಜರುಗಿಸಿದೆ. ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಾಣ ಮಾಡಲು 80 ಲಕ್ಷ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ 26 ಲಕ್ಷ ಹಣವನ್ನು ಕೆಆರ್‍ಡಿಎಲ್‍ಗೆ ವಹಿಸಲಾಗಿತ್ತು. ಇನ್ನು 15 ದಿನಗಳೊಳಗೆ ಈ ಸಂಸ್ಥೆ ಕಾಮಗಾರಿ ಆರಂಭಿಸದಿದ್ದರೆ ಹಣ ವಾಪಸ್ ಪಡೆದು ಲೋಕೋಪಯೋಗಿ ಇಲಾಖೆಗೆ ನೀಡಲಾಗುವುದು ಎಂದು ತಿಳಿಸಿದರು.