ಡಿಸೆಂಬರ್ ಅಂತ್ಯಕ್ಕೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು, ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ(ಸುವರ್ಣಸೌಧ), ಡಿ.19-ರಾಜದಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹಿಂಗಾರು ಮಳೆ ಕೊರತೆಯನ್ನು ಅಧರಿಸಿ ಇನ್ನಷ್ಟು ತಾಲೂಕುಗಳು ಬರಪೀಡಿತವಾಗಿದ್ದು, ಅವುಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ.ಡಿಸೆಂಬರ್ ಅಂತ್ಯಕ್ಕೆ ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬರಪೀಡಿತ ತಾಲೂಕುಗಳ ಬಗ್ಗೆ ಸುದೀರ್ಘವಾಗಿ ನಡೆದ ಚರ್ಚೆಗೆ ಇಂದು ಸರ್ಕಾರದ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಮಗ್ರ ಮಾಹಿತಿ ನೀಡಿದರು.

ಅದಕ್ಕೆ ಉಪಪ್ರಶ್ನೆ ಕೇಳಲಾರಂಭಿಸಿದ ಶಾಸಕರ ಪೈಕಿ ಹೊನ್ನಾಳಿಯ ರೇಣುಕಾಚಾರ್ಯ, ರಾಯಭಾಗದ ದುರ್ಯೋಧನ ಐಹೊಳೆ, ಹಾವೇರಿಯ ನೆಹರೂ ಓಲೇಕರ್, ಅಳಂದ ಕ್ಷೇತ್ರದ ಸುಭಾಷ್ ಗುತ್ತೇದಾರ್ ಮತ್ತಿತರ ಶಾಸಕರು ತಮ್ಮ ಕ್ಷೇತ್ರಗಳಲ್ಲೂ ಬರ ಇದ್ದು, ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಹಳಷ್ಟು ಮಂದಿ ಶಾಸಕರು ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟರು.ಆಗ ಉತ್ತರ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಬರಪರಿಸ್ಥಿತಿ ಬಗ್ಗೆ 9 ಗಂಟೆ ಚರ್ಚೆಯಾಗಿದೆ.ನಾನು ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸದನ ಉತ್ತಮವಾಗಿ ನಡೆಯಲು ಪ್ರತಿಪಕ್ಷದ ಶಾಸಕರು, ಬಿಜೆಪಿ ನಾಯಕರು ಸಹಕಾರ ನೀಡಿದ್ದಾರೆ ಅದಕ್ಕೆ ಧನ್ಯವಾದ.ನಿಮ್ಮ ಬೇಡಿಕೆ ಏನೆಂಬುದು ನನಗೆ ಅರ್ಥವಾಗಿದೆ.ಮುಂಗಾರು ಮಳೆ ಕೊರತೆಯಿಂದಾಗಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಹಿಂಗಾರು ಮಳೆಯೂ ಕೈಕೊಟ್ಟಿದೆ.ಬಹಳಷ್ಟು ಕ್ಷೇತ್ರಗಳು ತೊಂದರೆಗೆ ಸಿಲುಕಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು.

ಆದರೂ ಶಾಸಕರು ಪದೇ ಪದೇ ಬೇಡಿಕೆ ಮುಂದಿಟ್ಟಾಗ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣಭೆರೇಗೌಡ ಅವರು, ರಾಜ್ಯ ಸರ್ಕಾರ ನೇರವಾಗಿ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ 2016ರ ಡಿಸೆಂಬರ್‍ನಲ್ಲಿ ಬರಪೀಡಿತ ತಾಲೂಕುಗಳ ಘೋಷಣೆಗೆ ಮಾನದಂಡಗಳನ್ನು ರೂಪಿಸಿದೆ. 2017ರಲ್ಲಿ ಅದಕ್ಕೆ ಇನ್ನಷ್ಟು ನಿಯಮಗಳನ್ನು ಸೇರ್ಪಡೆ ಮಾಡಿದೆ.ಅದನ್ನು ಆಧಾರವಾಗಿಟ್ಟುಕೊಂಡೇ ಬರ ಅಂದಾಜು ಮಾಡಲಾಗುತ್ತದೆ ಎಂದರು.

ಮಾನವ ಸಹಜವಾಗಿ ಇಲ್ಲಿ ಯಾವುದೇ ಅಧ್ಯಯನ ನಡೆಯುವುದಿಲ್ಲ. ಎಲ್ಲವೂ ಯಾಂತ್ರೀಕೃತವಾಗಿದೆ.ರಾಜ್ಯದಲ್ಲಿ 6 ಸಾವಿರ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳಿವೆ. ಎಷ್ಟು ಮಳೆಯಾಗಿದೆ ಎಂಬ ಸಮಗ್ರ ಮಾಹಿತಿ ತನ್ನಷ್ಟಕ್ಕೇ ತಾನೇ ಪ್ರಕೃತಿ ವಿಕೋಪ ಕೇಂದ್ರಕ್ಕೆ ರವಾನೆಯಾಗುತ್ತದೆ.ಭೂಮಿಯ ತೇವಾಂಶದ ಬಗ್ಗೆ ಉಪಗ್ರಹ ಆಧಾರಿತವಾದ ಮಾಹಿತಿ ಸಂಗ್ರಹವಾಗುತ್ತದೆ.ಈ ಎಲ್ಲವನ್ನೂ ಆಧಾರವಾಗಿಟ್ಟುಕೊಂಡೇ ಬರ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತದೆ.
ಯಾಂತ್ರೀಕೃತ ಮಾಹಿತಿ ಮತ್ತು ಕೇಂದ್ರ ಸರ್ಕಾರದ ಮಾನದಂಡ ಹೊರತು ಪಡಿಸಿ ಹೆಚ್ಚುವರಿಯಾಗಿ ಒಂದು ತಾಲೂಕನ್ನೂ ನಾವು ಬರಪೀಡಿತ ಪಟ್ಟಿಗೆ ಸೇರಿಸಿದರೂ ಮುಂದೆ ನಾವು ಅನುದಾನ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ತಿರಸ್ಕಾರ ಮಾಡುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಸಚಿವರು ಬರಪೀಡಿತ ತಾಲೂಕುಗಳನ್ನು ಒತ್ತಾಯಪೂರ್ವಕವಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು, ನಾನು ಯಾವುದೇ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಪ್ರಯತ್ನ ಮಾಡುವುದಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ