ಬರ ಪರಿಸ್ಥಿತಿ ಎದುರಿಸಲು ಹಣದ ಕೊರತೆಯಿಲ್ಲ ಸಚಿವ ಅರ್.ವಿ.ದೇಶಪಾಂಡೆ

ಬೆಳಗಾವಿ (ಸುವರ್ಣಸೌಧ), ಡಿ.19-ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಎದುರಿಸಲು ಹಣದ ಕೊರತೆ ಇಲ್ಲ. ಉದ್ಯೋಗ ಅರಸಿ ಗುಳೆ ಹೋಗಲು ಬಿಡುವುದಿಲ್ಲ. ಜನ ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು.

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲ್ಲೂಕುಗಳ ಬರಗಾಲದಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಡಿದ ಸಾರ್ವಜನಿಕ ಮಹತ್ವದ ಚರ್ಚೆಗೆ ಸರ್ಕಾರದ ಪರವಾಗಿ ಅವರು ಉತ್ತರ ನೀಡಿದರು.

ಜಾನುವಾರುಗಳಿಗೆ ಅಗತ್ಯವಿರುವ ಗೋ ಶಾಲೆ ಹಾಗೂ ಮೇವು ಬ್ಯಾಂಕುಗಳನ್ನು ತೆರೆಯಲಾಗುವುದು. ರೈತರು ಹಾಗೂ ಬರದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ  ಆಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

2000ದಿಂದ ಇಲ್ಲಿಯವರೆಗೆ ದೇಶದ 24 ಜಿಲ್ಲೆಗಳಲ್ಲಿ ನಿರಂತರ ಬರ ಪರಿಸ್ಥಿತಿ ಇದ್ದು, ಕರ್ನಾಟಕದ 16 ಜಿಲ್ಲೆಗಳು ಒಳಗೊಂಡಿವೆ ಎಂದರು.
ನಿರಂತರವಾಗಿ ಉಂಟಾಗುತ್ತಿರುವ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಪರಿಣಿತರ ಸಮಿತಿಯನ್ನು ರಚಿಸಲಾಗುವುದು, ಬರ ಪರಿಸ್ಥಿತಿ ಎದುರಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಲಾಗುವುದು ಎಂದರು.

2019ರ ಮೇ ಅಂತ್ಯದವರೆಗೂ ನಮ್ಮ ರಾಜ್ಯದಿಂದ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡಲು ನಿಷೇಧಿಸಲಾಗಿದೆ.ಆದರೆ, ರಾಜ್ಯದ ಒಳಗೆ ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಹಿಂಗಾರು ಹಂಗಾಮಿನಲ್ಲೂ ಶೇ.48ರಷ್ಟು ಮಳೆ ಕೊರತೆ ಉಂಟಾಗಿದ್ದು, ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ 7 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ.ಮಳೆ ಕೊರತೆ ಹಾಗೂ ಬೆಳೆ ಹಾನಿಗೀಡಾಗಿರುವ ಎಲ್ಲಾ ತಾಲ್ಲೂಕುಗಳನ್ನು ಡಿ.31ರೊಳಗೆ ಬರ ಪೀಡಿತವೆಂದು ಘೋಷಣೆ ಮಾಡಲಾಗುವುದು.ಈ ಸಂಬಂಧ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಂಪುಟ  ಉಪ ಸಮಿತಿ ರಚಿಸಿದ್ದು, ಪ್ರತಿ ಹಳ್ಳಿ ಹಾಗೂ ವಾರ್ಡ್‍ನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಹಾಗೂ ಉದ್ಯೋಗ ಅರಸಿ ಗುಳೆ ಹೋಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಟಾಸ್ಕ್ ಫೋರ್ಸ್ಗೆ 50ಲಕ್ಷ :
ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್ ಫೋರ್ಸ್ಗೆಗೆ 50ಲಕ್ಷ  ನೀಡಿದ್ದು, ಆ ಹಣ ಸಾಲುವುದಿಲ್ಲ ಎಂಬ ಅಭಿಪ್ರಾಯವಿದೆ. ಮುಂಗಾರು ಹಂಗಾಮಿನ ಬರ ಪೀಡಿತ ನೂರು ತಾಲ್ಲೂಕುಗಳಿಗೆ ತಲಾ ಇನ್ನೂ 50 ಲಕ್ಷ ರೂಗಳನ್ನು ನೀಡಲಾಗುವುದು.ಈ ಹಣದಲ್ಲಿ ಕೊಳವೆ ಬಾವಿ ಕೊರೆಯುವುದು, ಪೈಪ್ ಅಳವಡಿಕೆ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.ಜಾನುವಾರು ಮೇವಿಗೆ 10 ಕೋಟಿ ರೂ.ವನ್ನು  ಒದಗಿಸಲಾಗಿದೆ ಎಂದು ಹೇಳಿದರು.

ಬರ ಪರಿಸ್ಥಿತಿಯನ್ನು ಎಲ್ಲರೂ ಒಗ್ಗೂಡಿ  ಎದುರಿಸಬೇಕಾಗುತ್ತದೆ. ರೈತರು, ಕೂಲಿಕಾರರು ಕಷ್ಟದಲ್ಲಿರುವಾಗ ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕು. ಬರವೆಂದರೆ ಪಕ್ಷದ ಕೆಲಸವಲ್ಲ ಎಂದರು.

ಜಿಲ್ಲಾಧಿಕಾರಿಗಳ ಬಳಿ ಐದು ಕೋಟಿ ರೂ. ಹಣವಿರುತ್ತದೆ. ಅದಕ್ಕಿಂತ ಕಡಿಮೆಯಾದಾಗ ಸರ್ಕಾರ ತಕ್ಷಣವೇ ಸರ್ಕಾರ ಹಣ ಮಂಜೂರು ಮಾಡಲಿದೆ. ಒಂದು ವೇಳೆ ಬರ ನಿರ್ವಹಣೆಗೆ ಹಣ ಖರ್ಚು ಮಾಡದಿರುವ ಬಗ್ಗೆ ದೂರು ಬಂದರೆ ಅಂತಹ ಅಧಿಕಾರಿಗಳ  ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಬರ ಪರಿಸ್ಥಿತಿಯನ್ನು ರಾಜ್ಯ ಎದುರಿಸುತ್ತಾ ಬಂದಿದೆ.ಕಳೆದ ಏಪ್ರಿಲ್‍ನಿಂದ ನವೆಂಬರ್ ಅವರೆಗೆ 142.58 ಕೋಟಿ ರೂ.ವನ್ನು ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಖಾತೆಯಿಂದ ಕುಡಿಯುವ ನೀರು, ಟ್ಯಾಂಕರ್ ಮತ್ತಿತರ ಕಾರ್ಯಗಳಿಗೆ ಖರ್ಚು ಮಾಡಿದ್ದಾರೆ ಎಂದು ತಿಳಿಸಿದರು.

ವಾರದಲ್ಲಿ ರೈತರಿಗೆ ಹಣ ಜಮಾ:
ನೆರೆ ಹಾವಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 546 ಕೋಟಿ ರೂ. ಮಂಜೂರು ಮಾಡಿದ್ದು, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗೆ ತಲಾ 6ಕೋಟಿ ರೂ.ನಂತೆ  ಹಣ ನೀಡಲಾಗುವುದು, ಮುಂದಿನ 7 ದಿನಗಳೊಳಗಾಗಿ ಭತ್ತ, ಕಾಫಿ ಬೆಳೆಗಾರರ ಖಾತೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಹಣವನ್ನು ಜಮಾ ಮಾಡಲಾಗುವುದು ಎಂದರು.

ಬರಪೀಡಿತ ಪ್ರದೇಶಗಳಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‍ನಲ್ಲಿ 2434 ಕೋಟಿ ರೂ.ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಎಸ್‍ಟಿಆರ್‍ಎಫ್ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ.ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, 15ನೇ ಹಣಕಾಸು ಆಯೋಗದಲ್ಲಿ ತಾರತಮ್ಯ ನಿವಾರಿಸುವ ಭರವಸೆಯನ್ನು ನೀಡಿದೆ ಎಂದು ಸುದೀರ್ಘವಾಗಿ ಬರಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳ ಸಹಿತ ಸದನಕ್ಕೆ ಸಚಿವರು ಉತ್ತರ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ