ಬೆಳಗಾವಿ, ಡಿ.18- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಪಕ್ಷದ ವಿರುದ್ಧ ರಣತಂತ್ರ ರೂಪಿಸಿ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಇದೇ 20ರಂದು ಬಿಜೆಪಿಯ ಮಹತ್ವದ ಸಭೆ ಬೆಳಗಾವಿಯಲ್ಲಿ ನಡೆಯಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ.
ಅಂದು ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಜೆಡಿಎಸ್ ಸರ್ಕಾರದ ವಿರುದ್ಧ ರಣತಂತ್ರ ರೂಪಿಸುವುದು, ಕನಿಷ್ಠ ಪಕ್ಷ 15ಕ್ಕೂ ಹೆಚ್ಚು ಲೋಕಸಭಾ ಚುನಾವಣೆಯನ್ನುಗೆಲ್ಲಲೇಬೇಕೆಂಬ ಗುರಿಯೊಂದಿಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಬಿಎಸ್ವೈ ಸೂಚನೆ ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸೂಚನೆ ಮೇರೆಗೆ ನಡೆಯುತ್ತಿರುವ ಸಭೆ ಇದಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಯ ಬಳಿ ಕೊಂಡೊಯ್ಯುವುದು, ಲೋಕಸಭಾ ಸಮರಕ್ಕೆ ಕಾರ್ಯಕರ್ತರನ್ನು ಹುರಿದುಂಬಿಸುವುದು, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹತ್ತು ಹಲವು ವಿಷಯಗಳು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಛತ್ತೀಸ್ಘಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ಕೇಂದ್ರ ವರಿಷ್ಠರು ಲೋಕಸಭೆ ಚುನಾವಣೆಗೆ ಮತ್ತಷ್ಟು ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.
ಮುಂಬರಲಿರುವ ಲೋಕಸಭೆ ಚುನಾವಣೆಗೆ ಈಗನಿಂದಲೇ ಪಕ್ಷವನ್ನು ಸಂಘಟಿಸುವುದು, ಎದುರಾಳಿ ಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಹೆಚ್ಚಿನ ಸ್ಥಾನಗಳಿಸಲು ಅಗತ್ಯ ಕಾರ್ಯತಂತ್ರಗಳನ್ನು ರೂಪಿಸುವಂತೆ ಎಲ್ಲ ಬಿಜೆಪಿ ಘಟಕದ ಅಧ್ಯಕ್ಷರಿಗೆ ಸೂಚನೆ ಕೊಡಲಾಗಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲು ಉಂಟಾಗಿದ್ದರೂ ಧೃತಿಗೆಡದೆ ಲೋಕಸಭೆ ಚುನಾವಣೆಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಲು ಸಜ್ಜಾಗುವಂತೆ ವರಿಷ್ಠರು ನಿರ್ದೇಶಿಸಿದ್ದಾರೆ.
ಬಿಜೆಪಿ ವಿರುದ್ದ ಮಹಾಘಟ್ಬಂದನ್ ರಚನೆಯಾದರೆ, ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚು ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುವ ಸಂಬಂಧ ಸೈನ್ಯವನ್ನು ಸಜ್ಜಗೊಳಿಸುವಂತೆ ಅಮಿತ್ ಷಾ ಸೂಚಿಸಿದ್ದಾರೆ.
ಜ.11 ಮತ್ತು 12ರಂದು ನವದೆಹಲಿಯಲ್ಲಿ ಬಿಜೆಪಿಯ ಮಹತ್ವದ ಸಭೆ ನಡೆಯಲಿದೆ. ಅಷ್ಟರೊಳಗೆ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷ ಸಂಘಟನೆ, ಯಾವ ಯಾವ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಪಕ್ಷದ ಮೇಲಾಗುವ ಪರಿಣಾಮಗಳು ಸೇರಿದಂತೆ ಪಕ್ಷದ ಸ್ಥಿತಿಗತಿಗಳ ಬಗ್ಗೆ ಬಿಎಸ್ವೈ ಹೈಕಮಾಂಡ್ಗೆ ವರದಿ ನೀಡಲಿದ್ದಾರೆ.
11-12ರ ಸಭೆಗೆ ಯಡಿಯೂರಪ್ಪ ಭಾಗವಹಿಸಲಿದ್ದು, ಬಿಜೆಪಿ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲಿದ್ದಾರೆ. ನಂತರ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಕೇಂದ್ರ ನಾಯಕರು ಸಲಹೆ ನೀಡಲಿದ್ದಾರೆ ಎಂದರು.
ಬಿಎಸ್ವೈಗೆ ಸಂಪೂರ್ಣ ಸ್ವಾತಂತ್ರ್ಯ: ಇನ್ನು ಈ ಬಾರಿಯ ಲೋಕಸಬೆ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಕೇಂದ್ರ ನಾಯಕರು ಸಂಪೂರ್ಣ ಅಧಿಕಾರನೀಡುವ ನೀಡಲು ತೀರ್ಮಾನಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರ, ಪ್ರಚಾರದ ಕಾರ್ಯಶೈಲಿ, ಪ್ರಣಾಳಿಕೆ ಸಿದ್ಧಪಡಿಸುವುದು ಸೇರಿದಂತೆ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ವರಿಷ್ಠರು ಬಿಎಸ್ವೈಗೆ ಯಾವುದೇ ರೀತಿ ಅಡ್ಡಿಪಡಿಸದಂತೆ ಸಂಪೂರ್ಣ ಜವಾಬ್ದಾರಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪನವರಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ಕೊಟ್ಟಿದ್ದರೆ ಸ್ವಂತ ಬಲದ ಮೇಲೆ ಅ ಧಿಕಾರ ಹಿಡಿಯುತ್ತಿದ್ದೇವು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೂ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗಲಾದರೂ ಲೋಕಸಭೆ ಚುನಾವಣೆ ವೇಳೆ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಕ್ಷದ ಸಂಪೂರ್ಣ ಜವಾಬ್ದಾರಿ ನೀಡಿದರೆ ಕನಿಷ್ಠ ಪಕ್ಷ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಹೀಗಾಗಿ ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪನವರಿಗೆ ಹೆಚ್ಚಿನ ಅಧಿಕಾರ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.