ಕೂಡಲೇ ರಾಜ್ಯ ಸರ್ಕಾರ ಡಿಪ್ಲೋಮಾ ಪದವೀಧರರನ್ನು ನೇಮಕಾತಿ ಮಾಡಿಕೊಳ್ಲಲು ಅನುಮತಿ ನೀಡಬೇಕು, ಶಾಸಕ ಆರಗ ಜ್ಞಾನೇಂದ್ರ

ಬೆಳಗಾವಿ(ಸುವರ್ಣಸೌಧ), ಡಿ.18- ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಐಸಿಎಆರ್‍ಗೆ ಅರ್ಜಿ ಸಲ್ಲಿಸಿ ರಸಗೊಬ್ಬರ ಮತ್ತು ಕೀಟನಾಶಕಗಳ ಡಿಪ್ಲೋಮಾ ಕೋರ್ಸ್‍ಗೆ ಜಾನಪದ ವಿವಿ ಅನುಮತಿ ಪಡೆದರೆ ವಿವಿಯಿಂದ ತರಬೇತಿ ಸರ್ಟಿಫಿಕೇಟ್ ಪಡೆದವರನ್ನು ನೇಮಕಾತಿ ಮಾಡಿಕೊಳ್ಳಲು ಪರಿಗಣಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರ್‍ರೆಡ್ಡಿ ಭರವಸೆ ನೀಡಿದರು.

ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಸಗೊಬ್ಬರ ಮಾರಾಟ ಮಾಡಲು ಕೃಷಿ ಪದವೀಧರರನ್ನು ನೇಮಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಈ ಮೊದಲು ನಿಯಮ ರೂಪಿಸಿತ್ತು. ಪ್ರಾಥಮಿಕ ಸಹಕಾರ ಸಂಘಗಳಂತಹ ಸಣ್ಣ ಸಂಸ್ಥೆಗಳು ಕೃಷಿ ಪದವೀಧರರನ್ನು ನೇಮಿಸಿಕೊಳ್ಳುವಷ್ಟು ಸಾಮಥ್ರ್ಯ ಹೊಂದಿರುವುದಿಲ್ಲ. ಹಾಗಾಗಿ ನಿಯಮ ಸಡಿಲ ಮಾಡಿ ಎಂದು ಕೇಂದ್ರಕ್ಕೆ ನಾವೆಲ್ಲ ಮನವಿ ಮಾಡಿದ ಪ್ರಯುಕ್ತ ಈಗ ನಿಯಮ ಸಡಿಲಗೊಂಡಿದೆ. ಅಂಗೀಕೃತ ವಿವಿಗಳಿಂದ ರಸಗೊಬ್ಬರ ಮತ್ತು ರಾಸಾಯನಿಕ ಕೀಟನಾಶಕಗಳ ಡಿಪ್ಲೋಮಾ ಒಂದು ಕೋರ್ಸ್ ಪಡೆದವರನ್ನು ನೇಮಿಸಿಕೊಳ್ಳಬಹುದೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಯಾವ ವಿಶ್ವವಿದ್ಯಾನಿಲಯಗಳು ಈ ರೀತಿಯ ಕೋರ್ಸನ್ನು ಪ್ರಾರಂಭಿಸಿಲ್ಲ. ಜಾನಪದ ವಿಶ್ವವಿದ್ಯಾನಿಲಯ ಮಾತ್ರ ಕೋರ್ಸ್ ಆರಂಭೀಸಿದೆ. ಈವರೆಗೂ ಎರಡೂವರೆ ಸಾವಿರ ಮಂದಿಗೆ ತರಬೇತಿ ನೀಡಿ ಸರ್ಟಿಫಿಕೇಟ್ ಕೊಟ್ಟಿದೆ. ಆದರೆ ಅವರನ್ನು ಪ್ರಾಥಮಿಕ ಸಹಕಾರ ಸಂಘಗಳು ನೇಮಕಾತಿ ಮಾಡಿಕೊಳ್ಳಲು ಕೃಷಿ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು.
ಕೂಡಲೇ ರಾಜ್ಯ ಸರ್ಕಾರ ಡಿಪ್ಲೋಮಾ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಶಿವಶಂಕರ್ ರೆಡ್ಡಿ ಅವರು, ನಿಯಮಗಳ ಪ್ರಕಾರ ಇದಕ್ಕೆ ಅವಕಾಶ ಇಲ್ಲ. ಜಾನಪದ ವಿಶ್ವವಿದ್ಯಾನಿಲಯ ಐಸಿಎಆರ್ ಸಂಸ್ಥೆ ನಿಯಮಾವಳಿಗಳಿಗೆ ಬದ್ಧರಾಗಿ ತರಬೇತಿ ಕೊಟ್ಟರೆ ಮಾತ್ರ ಅವಕಾಶ ನೀಡಲಾಗುವುದು. ಜಾನಪದ ವಿವಿ ಐಸಿಎಆರ್‍ನಿಂದ ಅನುಮತಿ ಪಡೆದುಕೊಳ್ಳಲು ಆನಂತರ ಪರಿಶೀಲಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ