ಹಾವು ಕಡಿತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಶಾಸಕ ಹರತಾಳ ಹಾಲಪ್ಪ ಹೇಳಿಕೆ

ಬೆಳಗಾವಿ(ಸುವರ್ಣಸೌಧ), ಡಿ.18-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಹಾವು ಕಡಿತದಿಂದ ಮೃತಪಟ್ಟ ಅಂಗನವಾಡಿ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಶಾಸಕರಾದ ಹರತಾಳ ಹಾಲಪ್ಪ ಹೇಳಿದರು.

ವಿಧಾನಸಭೆ ಶೂನ್ಯವೇಳೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿ, ಅಂಗನವಾಡಿ ಮಗುವಿಗೆ ಹಾವು ಕಚ್ಚಿ ಸಾವನ್ನಪ್ಪಿದೆ. ಅದು ಅರಣ್ಯ ಗಡಿಭಾಗದಲ್ಲಿರುವ ಅಂಗನವಾಡಿಯಾಗಿದ್ದು, ಅದರ ಸುತ್ತಲಿನ ಬೇಲಿ ಗಿಡ ಪೊದೆಯಾಗಿ ಬೆಳೆದಿತ್ತು. ಅದನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಅನುಮತಿ ಕೋರಿರಲಿಲ್ಲ. ಹಾವು ಕಚ್ಚಿ ಮಗು ಸಾವನ್ನಪ್ಪಿದೆ ಅವರಿಗೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಪರವಾಗಿ ಉತ್ತರ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಬಿಜೆಪಿಯ ಶಾಸಕರಾದ ವೀರಣ್ಣ ಚರಂತಿ ಮಠ ಅವರು, ತಮ್ಮ ಕ್ಷೇತ್ರದಲ್ಲಿ ಹಂಪಣ್ಣ ಮಲ್ಲಪ್ಪ ಹೂಗಾರ್ ಎಂಬ ರೈತ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ, 2 ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದೆ. ಒಂದೂವರೆ ಎಕರೆ ಜಮೀನಿತ್ತು. 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸ್ಪೀಕರ್ ಅವರ ಸೂಚನೆ ಮೇರೆಗೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲನೆ ಮಾಡಿ ಪರಿಹಾರ ನೀಡಲು ಸ್ಥಳೀಯ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ