ಬೆಳಗಾವಿ, ಡಿ.18- ಮುಂದಿನ ಬಜೆಟ್ನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನ ಹೆಚ್ಚಳದ ಬಗ್ಗೆಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಸ್ತುತ ವಿಧಾನಸಭೆ ಹಾಗೂ ಪರಿಷತ್ ಸದಸ್ಯರ ಕ್ಷೇತ್ರಕ್ಕೆ ವಾರ್ಷಿಕ 2 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಆದರೆ ಕಳೆದ ವರ್ಷ ಬಿಡುಗಡೆ ಯಾದ ಅನುದಾನದಲ್ಲಿ 939.74 ಕೋಟಿ ರೂ. ಅನುದಾನ ಖರ್ಚಾಗಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿದೆ.
ಅಲ್ಲದೆ ಪ್ರಸಕ್ತ ಸಾಲಿನ ಆಯವ್ಯಯದಲ್ಲೂ 600 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಲು ಶಾಸಕರು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಶಾಸಕರ ನಿಧಿ ಬಳಕೆಗೆ ನಿಯಮಗಳ ತೊಡಕ್ಕಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಹಣ ಬಳಕೆಗೆ ನಿಯಮವನ್ನು ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಯಲು ಸೀಮೆ, ಮಲೆನಾಡು ಹಾಗೂ ಹೈದರಾಬಾದ್ ಕರ್ನಾಟಕ ಮಂಡಳಿಗಳ ಅನುದಾನವನ್ನು ಹೆಚ್ಚಿಸಲಾಗಿದೆ. ಕಳೆದ 2001-02ರಲ್ಲಿ ಪ್ರತಿ ಕ್ಷೇತ್ರಕ್ಕೆ 25 ಲಕ್ಷ ರೂ. ನೀಡಲಾಗುತ್ತಿತ್ತು. 2013-14ನೇ ಸಾಲಿನಿಂದ ಪ್ರತಿ ಕ್ಷೇತ್ರಕ್ಕೆ ಅನುದಾನವನ್ನು ಎರಡು ಕೋಟಿಗೆ ಹೆಚ್ಚಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸ್ಥಳೀಯ ಶಾಸಕರ ಅನುದಾನವನ್ನು 2ರಿಂದ 5ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಕೋರಿದರು.
ಆಗ ಬಿಜೆಪಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ಈ ಹಂತದಲ್ಲಿ ಬಿಜೆಪಿಯ ಹಲವು ಶಾಸಕರು ಮಾತನಾಡಲು ಮುಂದಾಗಿದ್ದು ಸಬಾಧ್ಯಕ್ಷರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು. ರಮೇಶ್ಕುಮಾರ್ ಅವರು ಐದು ಜನ ಎದ್ದು ನಿಂತರೆ ಗೌರವ ಕಡಿಮೆಯಾಗುತ್ತದೆ. 20 ಜನ ಎದ್ದು ನಿಲ್ಲಿ ನಮ್ಮ ನಿಮ್ಮ ಗೌರವವೂ ಹೆಚ್ಚಾಗಲಿದೆ ಎಂದು ಪ್ರತಿಕ್ರಿಯಿಸಿದರು.
ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಶಾಸಕರ ಅನುದಾನದ ಹೆಚ್ಚಳದ ಬಗ್ಗೆ ಸದನದ ಗಮನ ಸೆಳೆದಿದ್ದಾರೆ. ಅವರ ಶ್ರೀಮತಿಯವರೂ ಕೂಡ ಒಂದು ಕ್ಷೇತ್ರದ ಶಾಸಕಿಯಲ್ಲವೆ ಎಂದು ಸಿಎಂ ಅತ್ತ ನೋಡಿದರು.
ಬಿಜೆಪಿ ಶಾಸಕ ಈಶ್ವರಪ್ಪ ಮಾತನಾಡಿ, ಷರತ್ತುಗಳ ಪಾಲನೆ ಕಷ್ಟವಾಗಿದೆ. ಅವುಗಳನ್ನು ತೆಗೆಯಬೇಕು. ನಿಗದಿತ ಅವಧಿಯಲ್ಲಿ ಅನುದಾನ ಬಳಿಸಿಕೊಳ್ಳದ ಶಾಸಕರ ಹಣವನ್ನು ಬೇರೆ ಶಾಸಕರಿಗೂ ವರ್ಗಾಯಿಸಲು ಕ್ರಮ ಕೈಗೊಳ್ಳಿ ಎಂಬ ಸಲಹೆ ನೀಡಿದರು.
ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ, ಕಾಮಗಾರಿ ಮುಗಿದಿದ್ದರೂ ಬಳಕೆ ಪ್ರಮಾಣ ಪತ್ರ ನೀಡುವುದರಲ್ಲಿ ವಿಳಂಬವಾಗುತ್ತಿರುವುದರಿಂದ ಅನುದಾನ ಬಳಕೆಯಾಗುತ್ತಿಲ್ಲ ಎಂಬ ಭಾವನೆ ಮೂಡಿದೆ ಎಂದರು.
ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ವರದಿ ಕೊಡುವುದು ವಿಳಂಬವಾಗುತ್ತಿದೆ. ಅವರು ತ್ವರಿತವಾಗಿ ವರದಿ ನೀಡುವಂತೆ ಸೂಚಿಸಬೇಕು ಎಂದರು.