ಬೆಳಗಾವಿ, ಡಿ.17-ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ವಾಸಿಸುವ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಮಾಹಿತಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಗೋಟ್ನೇಕರ ಶ್ರೀಕಾಂತ ಲಕ್ಷ್ಮಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರವು ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿ ಹೆಚ್ಚಿನ ಮಾಹಿತಿ ನೀಡಬೇಕೆಂದು ಸೂಚಿಸಿದೆ.ಹೀಗಾಗಿ ಮತ್ತೊಮ್ಮೆ ಮಾಹಿತಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಗೋವಾದಲ್ಲಿ ವಾಸ ಮಾಡುತ್ತಿರುವ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿದೆ. ನಮ್ಮ ರಾಜ್ಯ ಸರ್ಕಾರವು ಅಲ್ಲಿನ ವರದಿಯನ್ನು ತರಿಸಿಕೊಂಡು ಕೇಂದ್ರಕ್ಕೆ ಮಾಹಿತಿ ನೀಡಲಿ ಎಂದು ಸಚಿವರಿಗೆ ಲಕ್ಷ್ಮಣ ಮನವಿ ಮಾಡಿದರು.
ಈ ಬಗ್ಗೆ ಅಧಿಕಾರಿಗಳ ತಂಡವನ್ನು ಗೋವಾಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು. ಬಳಿಕ ಹೆಚ್ಚುವರಿಯಾಗಿ ಮಾಹಿತಿಯನ್ನು ನೀಡಿ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಲಾಗುವುದು.
ಈ ಜನಾಂಗ ಮೂಲತಃ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ ಮಾಡುತ್ತಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಬುಡಕಟ್ಟು ಜನಾಂಗವಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದರಿಂದ ಕೇಂದ್ರದಿಂದ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ನಮ್ಮ ಸರ್ಕಾರ ಈ ವಿಷಯದಲ್ಲಿ ಸಕಾರಾತ್ಮಕವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.