ಬೆಳಗಾವಿ,ಡಿ,17- ಬಹುದಿನಗಳ ಬೇಡಿಕೆಯಂತೆ ಅಡಿಕೆ ಮಂಡಳಿ ರಚನೆ ಸಂಬಂಧ ಸಾಧಕಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತವಾದ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಎಂ.ಸಿ.ಮನಗೊಳಿ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.
ಸದಸ್ಯ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಡಿಕೆ ಮಂಡಳಿ ರಚನೆ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.ತೋಟಗಾರಿಕೆ ಇಲಾಖೆ ಮತ್ತು ವಿವಿ ನೀಡಿರುವ ವರದಿಯನ್ನು ಪರಿಶೀಲನೆ ಮಾಡಲಾಗುವುದು. ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ಸದಸ್ಯ ಡಿಸೋಜ, ರಾಜ್ಯದಲ್ಲಿ ಅಡಿಕೆ ಮಂಡಳಿ ರಚಿಸುವಂತೆ ತೋಟಗಾರಿಕೆ ಮತ್ತು ವಿವಿ ವರದಿ ನೀಡಿದೆ.ಸರ್ಕಾರ ಯಾವ ಕಾರಣಕ್ಕಾಗಿ ಮಂಡಳಿ ರಚನೆ ಮಾಡಲು ಮೀನಾಮೇಷ ಎಣಿಸುತ್ತಿದೆ.ನಿಮಗಿರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದರು.
ವರದಿ ನೀಡಿ ಈಗಾಗಲೇ ಮೂರು ವರ್ಷವಾಗಿದೆ.ಇಂದು ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.ಕೊಳೆ ರೋಗ ಬಂದು ಸುಮಾರು 500 ಕೋಟಿಗೂ ಹೆಚ್ಚು ನಷ್ಟವಾಗಿದೆ.ಅಡಿಕೆ ಮಂಡಳಿ ರಚನೆಯಾದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದರು.
ಇದಕ್ಕೆ ದನಿಗೂಡಿಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಅಡಿಕೆ ಬೆಳೆಗಾರರು ಇಂದು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಕೊಳೆ ರೋಗದಿಂದ ಬೆಳೆ ನಷ್ಟವಾಗಿ ಅವರ ಜೀವನ ಮೂರಾಬಟ್ಟೆಯಾಗಿದೆ. ಮಂಡಳಿ ರಚನೆ ಮಾಡುವುದರಿಂದ ಒಂದಿಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಅಡಿಕೆ ಬೆಳೆ ಬಲವರ್ಧನೆಗೆ ಸಾಕಷ್ಟು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ವೈವಿಧ್ಯಕೀರಣ, ಉತ್ಪಾದನೆ, ಸಂಶೋಧನೆಗೆ ಒತ್ತು, ರೋಗ ಮತ್ತು ಕೀಟ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವಿವರಿಸಿದರು.