ಬೆಂಗಳೂರು,ಡಿ.16-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಇನ್ನು ಎರಡು ದಿನಗಳ ಕಾಲ ಮೋಡಕವಿದ ವಾತಾವರಣ ಹಾಗೂ ಗಾಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆತಾಯಿ ಚಂಡಮಾರುತ ಪರಿಣಾಮ ರಾಜ್ಯದ ಮೇಲೆ ಹೆಚ್ಚಾಗಿ ಆಗುವುದಿಲ್ಲ. ಆದರೆ ಉತ್ತರ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.ಡಿ.18ರವರೆಗೂ ಚಂಡಮಾರುತದ ತೀವ್ರತೆ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯದ ಪೂರ್ವಭಾಗ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ತಂಪಾದ ಹಾಗೂ ಬಲವಾದ ಮೇಲ್ಮೈ ಗಾಳಿ ಬೀಸುತ್ತಿದೆ. ಕೆಲವೆಡೆ ಹಗುರದಿಂದ ಸಾಧಾರಣವಾದ ಮಳೆ ಬೀಳುವ ಸಾಧ್ಯತೆ ಇದೆ.ಆದರೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಕಂಡುಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.