ಬೆಳಗಾವಿ(ಸುವರ್ಣಸೌಧ), ಡಿ.14- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ 35 ಸಾವಿರ ಕೋಟಿ ರೂ.ನಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಮಹಾಲೇಖಪಾಲರ ವರದಿ(ಸಿಎಜಿ)ಯನ್ನು ಮುಂದಿಟ್ಟುಕೊಂಡು ಸೋಮವಾರದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ.
ಸೋಮವಾರ ಮುಂದುವರೆದ ಕಲಾಪ ನಡೆಯಲಿದ್ದು, ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್ನ ಎರಡೂ ಕಡೆಗಳಲ್ಲಿ ಸಿಎಜಿ ವರದಿ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ತೀರ್ಮಾನಿಸಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಇದುವರೆಗೂ ಕಲಾಪದಲ್ಲಿ ಭಾಗವಹಿಸಿಲ್ಲ.
ಸೋಮವಾರದಿಂದ ಅಧಿವೇಶನ ಮುಗಿಯವವರೆಗೂ ಅವರು ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದು, ಮೊದಲ ದಿನವೇ ಈ ವರದಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯುವ ಮೂಲಕ ಸಿದ್ದರಾಮಯ್ಯನವರಿಗೆ ಮುಜುಗರ ಸೃಷ್ಟಿಸುವುದು ಬಿಜೆಪಿ ಕಾರ್ಯತಂತ್ರವಾಗಿದೆ.
ಈಗಾಗಲೇ ಪ್ರತಿಪಕ್ಷದ ನಾಯಕ ಯಡಿಯೂರಪ್ಪನವರ ಸೂಚನೆಯಂತೆ ಉಭಯ ಸದನಗಳಲ್ಲಿ ವರದಿ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿ ಬಿಜೆಪಿ ಪಟ್ಟು ಹಿಡಿಯಲಿದೆ ಎಂದು ತಿಳಿದುಬಂದಿದೆ.
ಸಿಎಜೆ ವರದಿ ಪ್ರಕಾರ 35 ಸಾವಿರ ಕೋಟಿ ಹಣ ಖರ್ಚು-ವೆಚ್ಚಕ್ಕೆ ತಾಳೆಯಾಗುತ್ತಿಲ್ಲ ಎಂಬುದು ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ.ಈ ಅಸ್ತ್ರವನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಿದ್ದತೆ ನಡೆಸಿದೆ.
2016-17ನೇ ಸಾಲಿನಲ್ಲಿ ಬಜೆಟ್ನಲ್ಲಿ ಮಂಡಿಸಿದ್ದ ಒಟ್ಟು ಹಣದ ಮೊತ್ತದಲ್ಲಿ 35 ಸಾವಿರ ಕೋಟಿ ಖರ್ಚಾಗಿರುವ ಬಗ್ಗೆ ಲೆಕ್ಕ ಇಲ್ಲ ಎಂಬುದು ಸಿಎಜೆ ವರದಿಯ ಆಕ್ಷೇಪವಾಗಿದೆ. ಲೋಕೋಪಯೋಗಿ , ಜಲಸಂಪನ್ಮೂಲ, ವಿದ್ಯುತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬೆಂಗಳೂರು ನಗರಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಿಗದಿ ಪಡಿಸಿದ ಅನುದಾನದಲ್ಲಿ ಹಣ ಖರ್ಚಾಗಿಲ್ಲ ಎಂಬ ಆರೋಪವಿದೆ.
ಬಿಜೆಪಿ ವಿರುದ್ಧ್ದ ಯಾವಾಗಲೂ ಗುಟುರು ಹಾಕುವ ಸಿದ್ದರಾಮಯ್ಯನವರನ್ನು ಈ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಸಿಎಜೆಯಲ್ಲಿರುವ ಆರೋಪ ಏನು?:
2016-17ನೇ ಆಯ-ವ್ಯಯದಲ್ಲಿ 35 ಸಾವಿರ ಕೋಟಿ ರೂಪಾಯಿಯಷ್ಟು ವೆಚ್ಚ ಹಾಗೂ ಸ್ವೀಕೃತಿಯ ಲೆಕ್ಕ ತಾಳೆ ಆಗುತ್ತಿಲ್ಲ. ಇದೇ ಸಿಎಜಿ ವರದಿ ಆಧರಿಸಿ ಸಿದ್ದರಾಮಯ್ಯನವರ ಮೇಲೆ ಕ್ರಮಕ್ಕೆ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ.
2016-17 ರ ಆಯವ್ಯಯದಲ್ಲಿ ಸುಮಾರು 35,000 ಕೋಟಿಗಳ ವೆಚ್ಚ ಮತ್ತು ಸ್ವೀಕೃತಿ ಲೆಕ್ಕ ತಾಳೆಯಾಗದೆ, ರಾಜ್ಯದ ಬೊಕ್ಕಸದಲ್ಲಿ ಅವ್ಯವಹಾರವಾಗಿದೆ.ಈ ಬಗ್ಗೆ ಸರ್ಕಾರ ಜನತೆಗೆ ವಿವರ ನೀಡಬೇಕೆಂಬುದು ಬಿಜೆಪಿ ವಾದ.
788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ.ಬಿಡುಗಡೆಯಾಗಿದೆ.
ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ, ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು, ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ, 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ, ಬಳಕೆಯಾಗದ 1199.81 ಕೋಟಿ ರೂ.ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ, 254.34 ಕೋಟಿ ರೂ.ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ, 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ ನೀಡಿರುವುದು.
2016-17ರ ಆಯವ್ಯಯದ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ.ವರದಿ ಆಧರಿಸಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡದ ತಂತ್ರ ಅನುಸರಿಸಲಿದೆ.
ಸಿಎಜಿ ವರದಿ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ ಚರ್ಚೆ ನಡೆಯಬೇಕೆಂಬುದು ಬಿಜೆಪಿಯ ಆಗ್ರಹವಾಗಿದೆ.
ಹಾಲಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಸಚಿವರಾಗಿರುವಾಗಲೇ, ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ. ಈ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಕರಣ ಸಾಬೀತಾಗಿದೆ.ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಮುಂದಿಡಲಿದೆ.