ಬೆಳಗಾವಿ,ಡಿ.14- ಬೆಂಗಳೂರಿನ ಮೆಟ್ರೊ ರೈಲು ಮಾರ್ಗದಲ್ಲಿ ಬಿರುಕು ಬಿಟ್ಟಿರುವ ಸೇತುವೆ ವಿಚಾರದ ಬಗ್ಗೆ ಅಗತ್ಯಬಿದ್ದರೆ ತನಿಖೆಗೂ ಆದೇಶಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೋ ರೈಲು ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ತಜ್ಞರ ವರದಿ ಪಡೆಯಲಾಗುವುದು. ಆ ವರದಿಯಲ್ಲಿ ಕಾಮಗಾರಿಯಲ್ಲಿ ಲೋಪದೋಷ ಕಂಡು ಬಂದರೆ ತನಿಖೆಗೂ ಆದೇಶಿಸಲಾಗುವುದು.ನಾಳೆ ತಾವು ಕೂಡ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಮೆಟ್ರೋ ಮಾರ್ಗದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಈಗಾಗಲೇ ತಜ್ಞರು ಪರಿಶೀಲನೆ ನಡೆಸಿದ್ದಾರೆ.ದೆಹಲಿ ಮೆಟ್ರೋ ರೈಲು ನಿಗಮದ ತಜ್ಞರು ಕೂಡ ಆಗಮಸಿ ಪರಿಶೀಲಿಸಿದ್ದಾರೆ. ಬಿರುಕು ಬಿಟ್ಟಿರುವುದನ್ನು ದುರಸ್ತಿ ನಡೆಸುವ ಕಾರ್ಯವೂ ನಡೆದಿದೆ.ತಜ್ಞರ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕರು ರೆಸಾರ್ಟ್‍ಗೆ ಹೋಗುವುದು ತಪ್ಪಲ್ಲ:
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರನ್ನು ಶಾಸಕರು ಭೇಟಿಯಾಗುವುದಾಗಲಿ, ರೆಸಾರ್ಟ್‍ಗೆ ಹೋಗುವುದಾಗಲಿ ತಪ್ಪಲ್ಲ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಡಿ.18ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಮೈತ್ರಿ ಸರ್ಕಾರದ ಆಡಳಿತ ಪಕ್ಷಗಳ ಶಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸೆಂಬರ್ 21ರಂದು ನಾವು ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ನಾಯಕರನ್ನು ಭೇಟಿ ಮಾಡುವುದು ತಪ್ಪೇನಿಲ್ಲ ಎಂದು ಪರಮೇಶ್ವರ್ ಹೇಳಿದರು.