ಬೆಳಗಾವಿ,ಡಿ.14-ಚಾಮುಂಡೇಶ್ವರಿ ದೇವಾಲಯದಲ್ಲಿ ಅರ್ಚಕರು ಸೇರಿದಂತೆ ಸಿಬ್ಬಂದಿ ನಡೆಸುತ್ತಿರುವ ಧರಣಿ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
ಬಿಜೆಪಿ ಶಾಸಕ ರಾಮದಾಸ್ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರಿ ನೌಕರರೆಂದು ಅರ್ಚಕರನ್ನು ಪರಿಗಣಿಸಿದ್ದರೂ 6ನೇ ವೇತನ ಆಯೋಗದ ಶಿಫಾರಸ್ಸು ಅನ್ವಯ ಇಪಿಎಫ್, ಇಎಸ್ಐ ಸೌಲಭ್ಯ ನೀಡಿಲ್ಲ ಎಂದು ಸದನದ ಗಮನ ಸೆಳೆದರು.
ಮುಜರಾಯಿ ಸಚಿವ ರಾಜಶೇಖರ್ ಪಾಟೀಲ್ ಮಾತನಾಡಿ, ಚಾಮುಂಡೇಶ್ವರಿ ಬೆಟ್ಟದ ದೇಗುಲದ ಅರ್ಚಕರ ಧರಣಿ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಒಟ್ಟು 171 ಮಂದಿ ಅರ್ಚಕರು ಕೆಲಸ ನಿರ್ವಹಿಸುತ್ತಿದ್ದು, ಅದರಲ್ಲಿ 76 ಜನರಿಗೆ 5ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸೌಲಭ್ಯ ಕಲ್ಪಿಸಲಾಗಿದೆ. ಅರ್ಚಕರ ಸಮಸ್ಯೆ ಪರಿಹರಿಸಲು ಸಮಿತಿ ರಚನೆ ಮಾಡಲಾಗಿದ್ದು, ಅದರ ವರದಿಯೂ ಬಂದಿದೆ ಎಂದರು.
ಇಂದು ಅರ್ಚಕರ ಧರಣಿಯಿಂದಾಗಿ ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗಿಲ್ಲ. ಇತರೆ ಸೇವೆಗಳು ಮಾತ್ರ ಯಾವುದು ನಡೆಯುತ್ತಿಲ್ಲ. ದೇವಾಲಯಕ್ಕೆ ಬರುವ ಆದಾಯದಲ್ಲಿ ಶೇ.35ರಷ್ಟು ಹಣದಲ್ಲಿ ಅರ್ಚರಕರಿಗೆ ವೇತನ ಸೇರಿ ಇತರೆ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.