ಫಸಲ್ ಭೀಮಾ ಯೋಜನೆಯಡಿ ರೈತರಿಗೆ ವಂಚನೆ, ತನಿಖೆ ನಡೆಸುವುದಾಗಿ ಹೇಳಿದ ರಾಜ್ಯ ಸರ್ಕಾರ

ಬೆಳಗಾವಿ(ಸುವರ್ಣಸೌಧ), ಡಿ.14- ಪ್ರಧಾನಮಂತ್ರಿ ಫಸಲ್‍ಭೀಮಾಯೋಜನೆಯಡಿ ರೈತರಿಗೆ ಆಗಿರುವ ವಂಚನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಪಕ್ಷ ಭೇದ ಮರೆತು ಶಾಸಕರು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಭಾಧ್ಯಕ್ಷ ರಮೇಶ್‍ಕುಮಾರ್ ಧ್ವನಿಗೂಡಿಸಿ, ಶಾಸಕರ ಅಭಿಪ್ರಾಯದಲ್ಲಿ ಗಂಭೀರತೆ ಇದೆ.ಅದನ್ನು ತನಿಖೆ ನಡೆಸಿ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಿ.ತಪ್ಪು ಮಾಡಿದವರು ಕೋರ್ಟ್‍ನಲ್ಲಿ ಬೇಲ್‍ಗಾಗಿ ನಿಲ್ಲುವಂತೆ ಮಾಡಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

ಅದಕ್ಕೆ ಸಹಮತ ವ್ಯಕ್ತಪಡಿಸಿದ ಕೃಷಿ ಸಚಿವ ಎನ್.ಎಚ್.ಶಿವಶಂಕರ್‍ರೆಡ್ಡಿ ಅವರು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಜೆಡಿಎಸ್‍ನ ಅರಸಿಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ, ನನ್ನ ವಿಧಾನಸಭಾ ಕ್ಷೇತ್ರದ ಮಾಡಾಳು, ಲಾಳನಕೆರೆ, ಬಾಗೀವಾಳು, ಪುರಲೇಹಳ್ಳಿ, ಬೆಳಗುಂಬ ಗ್ರಾಮ ಪಂಚಾಯ್ತಿಗಳಲ್ಲಿ ಬೆಳೆ ನಷ್ಟವಾಗಿದ್ದರೂ ರೈತರಿಗೆ ವಿಮೆಯ ಪರಿಹಾರ ನೀಡಿಲ್ಲ. ವಿಮೆ, ಬ್ಯಾಂಕ್, ಗ್ರಾಪಂ ಪಿಡಿಒ ಮತ್ತು ಗ್ರಾಮ ಲೆಕ್ಕಿಗ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡುತ್ತದೆ. ನನ್ನ ಕ್ಷೇತ್ರದ 36 ಪಂಚಾಯ್ತಿಗಳಲ್ಲಿ 32 ಪಂಚಾಯ್ತಿಗಳಿಗೂ ನಾನು ಹೋಗಿದ್ದೆ.ನಾಲ್ಕೈದು ಪಂಚಾಯ್ತಿಗಳ ಪರಿಶೀಲನೆಗೆ ಹೋಗಲು ಆಗಲಿಲ್ಲ. ಪರಿಶೀಲನೆ ಮಾಡಿದ ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ.ನಮ್ಮ ಸರ್ಕಾರದ ಅಧಿಕಾರಿಗಳೇ ವಂಚನೆ ಮಾಡಿರುವುದು ದುರಂತ.ವಿಮಾ ಕಂಪೆನಿಗಳು ಡಾಕುಗಳಿದ್ದಂತೆ.ರೈತರಿಗೆ ಮೋಸ ಮಾಡಲು ಬಂದಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿ, ತಪ್ಪು ಕಂಡು ಬಂದರೆ ಅಧಿಕಾರಿಗಳನ್ನು ಶಿಕ್ಷಿಸಿ.ನಾನು ಸುಳ್ಳು ಆರೋಪ ಮಾಡಿದ್ದರೆ ನನ್ನನ್ನೂ ಶಿಕ್ಷಿಸಿ.ಯಾವ ಶಿಕ್ಷೆಗೂ ಸಿದ್ದ ಎಂದು ಸವಾಲು ಹಾಕಿದರು.

ಈ ವೇಳೆ ಸ್ಪೀಕರ್ ಮಧ್ಯ ಪ್ರವೇಶಿಸಿ ಶಿಲಿವಲಿಂಗೇಗೌಡ ಅವರ ಒತ್ತಾಯದಂತೆ ತನಿಖೆ ಮಾಡಿ ವರದಿ ಪಡೆಯಿರಿ ಎಂದು ಹೇಳಿದರು.
ಅದಕ್ಕೆ ಕೃಷಿ ಸಚಿವರು ಪರಿಶೀಲಿಸುವ ಮಾತನ್ನಾಡಿದಾಗ, ಶಾಸಕ ಶಿವಲಿಂಗೇಗೌಡ ಮತ್ತು ಸ್ಪೀಕರ್ ಅವರು ಪರಿಶೀಲನೆ ಬೇಡ, ತನಿಖೆ ಮಾಡಿ ಎಂದು ನಿಷ್ಟ್ಟುರವಾಗಿ ಹೇಳಿದರು.

ಜೆಡಿಎಸ್‍ನ ಬಾಲಕೃಷ್ಣ, ಬಿಜೆಪಿಯ ಪೂರ್ಣಿಮಾ, ಚಂದ್ರಪ್ಪ ಸೇರಿದಂತೆ ಹಲವಾರು ಮಂದಿ ಮಾತನಾಡಿ, ವಿಮೆ ಯೋಜನೆಯಲ್ಲಿ ಮೋಸವಾಗುತ್ತಿದೆ.ಚಿತ್ರದುರ್ಗ ಜಿಲ್ಲೆಯಲ್ಲಿ ರೈತರಿಂದ 121 ಕೋಟಿ ವಿಮಾ ಕಂತು ಸಂಗ್ರಹಿಸಿದ್ದಾರೆ. ರೈತರಿಗೆ ಪರಿಹಾರ ರೂಪದಲ್ಲಿ ಕೊಟ್ಟಿರುವುದು 21 ಕೋಟಿ ಮಾತ್ರ. ಉಳಿದ ಹಣ ಏನಾಯಿತು ಎಂದು ಪೂರ್ಣಿಮಾ ಮತ್ತು ಚಂದ್ರಪ್ಪ ಪ್ರಶ್ನಿಸಿದರು.

ವಿಮೆ ಎಂಬುದು ವ್ಯಾಪಾರ ಆಗಿದೆ.ಇಲ್ಲಿ ಇನ್ಸೂರೆನ್ಸ್, ಅಸೂರೆನ್ಸ್, ಎನ್ಸೂರೆನ್ಸ್ ಎಂಬುದನ್ನು ಮರೆಯಲಾಗಿದೆ ಎಂದು ರಮೇಶ್‍ಕುಮಾರ್ ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಯಡಿಯೂರಪ್ಪ ಅವರು, ಭೀಕರ ಬರಗಾಲವಿದೆ.ಬ್ಯಾಂಕ್, ವಿಮಾ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ.ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ರೈತರು ಬೀದಿಗಿಳಿಯಲಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜೆಡಿಎಸ್‍ನ ಶಾಸಕ ಶ್ರೀನಿವಾಸ್‍ಗೌಡ, ನಾನೂ ಒಂದು ವಿಮಾ ಕಂಪೆನಿಯ ಅಧ್ಯಕ್ಷನಾಗಿದ್ದೇನೆ. ವಿಮಾ ಕಂಪೆನಿಗಳು ಮೋಸ ಮಾಡುತ್ತವೆ ಎಂಬ ಅರ್ಥದಲ್ಲಿ ಆರೋಪಗಳಿವೆ. ಆದರೆ, ನಿಯಮ ಬದ್ಧವಾಗಿ ವಿಮೆ ಪಾವತಿಮಾಡಲಾಗುತ್ತದೆ.ಯಾವುದಾದರು ಪ್ರಕರಣದಲ್ಲಿ ವಂಚನೆಯಾಗಿದ್ದರೆ ಅದಕ್ಕೆ ಆಧಾರ ಕೊಡಿ ಎಂದರು.

ಆಗ ರಮೇಶ್‍ಕುಮಾರ್ ಮತ್ತು ಶಿವಲಿಂಗೇಗೌಡ ಅವರು, ನಾವು ನಿಮ್ಮ ಕಂಪೆನಿಯ ಮೇಲೆ ಆರೋಪ ಮಾಡಿಲ್ಲ. ವಂಚನೆ ಮಾಡಿದ ಕಂಪೆನಿಯ ಹೆಸರು ಪ್ರಸ್ತಾಪಿಸಿದ್ದೇವೆ ಎಂದು ಪ್ರಕ್ರಿಯಿಸಿದರು.
ಸ್ಪೀಕರ್ ಸೂಚನೆ ಮೇರೆಗೆ ರೈತರಿಗೆ ಆಗಿರುವ ಅನ್ಯಾಯಕ್ಕೆ ತನಿಖೆ ನಡೆಸುವುದಾಗಿ ಸರ್ಕಾರ ಸಹಮತ ವ್ಯಕ್ತಪಡಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ