ಅಗರ್ತಲಾ:ಮಾ-8: ಬರೋಬ್ಬರಿ 20 ವರ್ಷ ಕಾಲ ತ್ರಿಪುರಾದಲ್ಲಿ ಆಡಳಿತ ನಡೆಸಿದ್ದ ಮಾಣಿಕ್ ಸರ್ಕಾರ್ ಇನ್ಮುಂದೆ ಪಕ್ಷದ ಕಛೇರಿಯಲ್ಲಿಯೇ ವಾಸವಾಗಲಿದ್ದಾರೆ ಎನ್ನಲಾಗಿದೆ. ಕಾರಣ ಮಾಣಿಕ್ ಸರ್ಕಾರ್ ಗೆ ತಮ್ಮದೆಂದು ಹೇಳಿಕೊಳ್ಳಲು ಸ್ವಂತ ಮನೆ ಇಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಇದೀಗ ಅವರ ಪಕ್ಷ ಚುನಾವಣೆಯಲ್ಲಿ ಸೋತಿರುವುದರಿಂದ ಅವರು ಅನಿವಾರ್ಯವಾಗಿ ಸರ್ಕಾರಿ ಬಂಗಲೆ ತೆರವು ಮಾಡಿದ್ದು, ಇದೀಗ ತಮ್ಮ ಪಕ್ಷದ ಕಚೇರಿಯನ್ನೇ ಮನೆ ಮಾಡಿಕೊಂಡು ಅಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ತ್ರಿಪುರಾದ ಮಾಣಿಕ್ ಸರ್ಕಾರ್ ಸಿಪಿಐ(ಎಂ) ಕಚೇರಿ ಆವರಣದಲ್ಲಿರುವ ಅತಿಥಿಗೃಹದ ಕೋಣೆಯೊಂದರಲ್ಲಿ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಜತೆ ವಾಸವಾಗಿದ್ದಾರೆ.
ತ್ರಿಪುರಾ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿಪ್ಲಬ್ ದೇಬ್ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಗುರುವಾರವೇ ಸರ್ಕಾರ್ ಅವರು ವಾಸ್ತವ್ಯ ಬದಲಿಸಿದರು. ಇನ್ನು ಮಾಣಿಕ್ ಸರ್ಕಾರ್ ಅವರು ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ನಿಯೋಜಿತ ಮುಖ್ಯಮಂತ್ರಿ ಬಿಪ್ಲಬ್ ಅವರು, ಸರ್ಕಾರ್ ಅವರಿಗೆ ಉತ್ತಮ ವಸತಿಗೃಹ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸರ್ಕಾರ್ ಸಿಎಂ ಆಗಿದ್ದಾಗಲೂ ತಮ್ಮ ವೇತನವನ್ನು ಪಕ್ಷಕ್ಕೆ ನೀಡುತ್ತಿದ್ದರು. ಸರ್ಕಾರ್ ಅವರಿಗೆ ಜೀವನ ನಿರ್ವಹಣೆಗೆಂದು ಪಕ್ಷ ಪ್ರತಿ ತಿಂಗಳು 10,000 ನಿರ್ವಹಣಾ ಭತ್ಯೆ ಮಾತ್ರ ನೀಡುತ್ತಿತ್ತು. ಮಾಣಿಕ್ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಹೋದರಿಗೆ ಕೊಡುಗೆಯಾಗಿ ನೀಡಿದ್ದಾರೆ. ಇನ್ನು ಸರ್ಕಾರ್ ದಂಪತಿಗೆ ಮಕ್ಕಳಿಲ್ಲ. ಪಕ್ಷದ ಕಚೇರಿಯ ಕಿಚನ್ನಲ್ಲಿ ತಯಾರಾಗುವ ಅಡುಗೆಯನ್ನೇ ಅವರು ಸೇವಿಸಲಿದ್ದಾರೆ. ಹೊಸ ಸರ್ಕಾರ ವಸತಿಗೃಹ ಮಂಜೂರು ಮಾಡಿದರೆ ಅದರಲ್ಲಿ ವಾಸಿಸುವ ತೀರ್ಮಾನ ಸರ್ಕಾರ್ ಅವರಿಗೇ ಬಿಟ್ಟಿದ್ದು ಎಂದು ಕಚೇರಿ ಕಾರ್ಯದರ್ಶಿ ಹರಿಪಾದ ದಾಸ್ ತಿಳಿಸಿದ್ದಾರೆ.