ಬೆಳಗಾವಿ(ಸುವರ್ಣಸೌಧ), ಡಿ.13- ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ತಾಂತ್ರಿಕ ತೊಡಕ್ಕಿದ್ದು, ಸರ್ಕಾರದ ಅನುಮತಿ ಸಿಕ್ಕರೆ ಪರಿಶೀಲನೆ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದಪಾಟೀಲ್ ಹೇಳಿದರು.
ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಕ್ಷೇತ್ರದ ಕಾಡಗೊಂಡನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಆ ಭಾಗದಲ್ಲಿ ಬಡ ಜನರು ಹೆಚ್ಚು ವಾಸಿಸುತ್ತಿದ್ದಾರೆ.ಅವರಿಗೆ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಶಿವಾನಂದಪಾಟೀಲ್ ಅವರು, ಆರೋಗ್ಯ ಕೇಂದ್ರವು 73560 ಜನಸಂಖ್ಯೆಯನ್ನು ಹೊಂದಿದೆ. ಈ ಆಸ್ಪತ್ರೆಯ 8 ಕಿ.ಮೀ. ಅಂತರದಲ್ಲಿ ಬೌರಿಂಗ್ ಆಸ್ಪತ್ರೆ, ಘೋಷ ಹೆರಿಗೆ ಆಸ್ಪತ್ರೆ , 12 ಕಿ.ಮೀ. ಅಂತರದಲ್ಲಿ ವಿಕ್ಟೋರಿಯಾ, ವಾಣಿವಿಲಾಸ ಆಸ್ಪತ್ರೆ, 18 ಕಿ.ಮೀ. ಅಂತರದಲ್ಲಿ ಯಲಹಂಕ ಸಾರ್ವಜನಿಕ ಆಸ್ಪತ್ರೆ, 10 ಕಿ.ಮೀ. ಅಂತರದಲ್ಲಿ ಕೆ.ಆರ್.ಪುರ ಆಸ್ಪತ್ರೆ ಇದೆ. ಜತೆಗೆ ಕಾಡುಗೊಂಡನಹಳ್ಳಿಯಲ್ಲಿ ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆ ಇದೆ. ಹಾಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ತಾಂತ್ರಿಕ ಅಡಚಣೆ ಇದೆ. ಸರ್ಕಾರ ಅದಕ್ಕೆ ಅನುಮತಿ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.