ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಖಾಯಂ ಸೇವಾ ಭದ್ರತೆ, ಸಿ.ಎಂ. ಜೊತೆ ಚರ್ಚಿಸಿ ತೀರ್ಮಾನ, ಸಚಿವ ಜಿ.ಟಿ.ದೇವೇಗೌಡ

ಬೆಳಗಾವಿ,ಡಿ.13- ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಹಾಗೂ ಖಾಯಂ ಸೇವಾ ಭದ್ರತೆ ಒದಗಿಸುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ನಿರಾಣಿ ಹನುಮಂತ ರುದ್ರಪ್ಪ ಹಾಗೂ ಎಸ್.ಎಲ್.ಬೋಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು 2018-19ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12642 ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೇತನ ಹೆಚ್ಚಳ, ಸೇವಾ ಭದ್ರತೆ ಒದಗಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು, ನಂತರವೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಅತಿಥಿ ಉಪನ್ಯಾಸಕರಿಗೆ ಮಾಸಿಕ ವೇತನವಾಗಿ 13 ಸಾವಿರ ಗೌರವ ಧನವಾಗಿ ನೀಡಲಾಗುತ್ತಿದೆ. ಈ ಹಿಂದೆ ಅವರಿಗೆ 11,500 ರೂ.ನೀಡಲಾಗುತ್ತಿತ್ತು. ವಯೋಮಿತಿ ಮೀರಿದ ಅತಿಥಿ ಉಪನ್ಯಾಸಕರು ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನುವಾಗುವಂತೆ ನಿಗದಿಪಡಿಸಿದ ವಯೋಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ 40ರಿಂದ 45 ವರ್ಷ, ಹಿಂದುಳಿದ ವರ್ಗದವರಿಗೆ 42ರಿಂದ 45 ವರ್ಷ, ಎಸ್ಸಿ-ಎಸ್ಟಿ ಅವರಿಗೆ 45ರಿಂದ 50 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದರು.

ಈವರೆಗೂ ಯುಜಿಸಿ ನಿಯಮಾವಳಿ ಪ್ರಕಾರವೇ ವೇತನವನ್ನು ನೀಡಲಾಗುತ್ತಿದೆ.ಅತಿಥಿ ಉಪನ್ಯಾಸಕರಿಗೆ ಒಂದೊಂದು ವಿವಿಯಲ್ಲಿ ಒಂದೊಂದು ರೀತಿಯ ವೇತನ ನಿಗದಿ ಮಾಡಲಾಗಿದೆ.ಧಾರವಾಡ ವಿವಿಯಲ್ಲಿ ಅತಿಥಿ ಉಪನ್ಯಾಸಕರಿಗೆ 25 ಸಾವಿರ ಮಾಸಿಕ ವೇತನ ನೀಡಿದರೆ ಕೆಲವು ಕಡೆ ಕಡಿಮೆ ವೇತನ ನೀಡಲಾಗುತ್ತಿದೆ.ಎಲ್ಲ ವಿವಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಒಂದೇ ಮಾದರಿ ವೇತನ ನೀಡುವ ಸಂಬಂಧ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಇನ್ನೊಂದು ಸುತ್ತಿನ ಸಭೆ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆ ಮಾಡಲು ಸರ್ಕಾರ ಕೈಗೊಂಡಿದೆ. 412 ಸರ್ಕಾರಿ ಕಾಲೇಜಿನಲ್ಲಿ ವೇತನ ನೀಡುತ್ತಿಲ್ಲ ಎಂಬ ದೂರು ಬಂದಿದ್ದು, ಈ ಸಂಬಂಧ ಜಂಟಿ ನಿರ್ದೇಶಕರ ಸಭೆ ಕರೆದು ಈಗಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಬಾಕಿ ಇರುವ ವೇತನ ಅತಿಥಿ ಉಪನ್ಯಾಸಕರ ಕೈ ಸೇರಲಿದೆ ಎಂದರು.

ಇನ್ನು ಮುಂದೆ ಜಂಟಿ ನಿರ್ದೇಶಕರು, ಪ್ರಾಂಶುಪಾಲರ ಜತೆ ಚರ್ಚಿಸಿ ವೇತನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಿದ್ದಾರೆ.ಉನ್ನತ ಶಿಕ್ಷಣ ಇಲಾಖೆಗೆ ನಮ್ಮ ಸರ್ಕಾರ ಕಾಯಕಲ್ಪ ನೀಡಲಿದೆ ಎಂದರು.

ಇದಕ್ಕೂ ಮುನ್ನ ಆಯನೂರು ಮಂಜುನಾಥ್, ಶರಣಪ್ಪ ಮಟ್ಟೂರು, ಮರಿತಿಬ್ಬೇಗೌಡ ಸೇರಿದಂತೆ ಮತ್ತಿತರ ಸದಸ್ಯರು ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ನಿರ್ದಿಷ್ಟ ದಿನಾಂಕದಂದು ವೇತನ ನೀಡಬೇಕು. ಜತೆಗೆ ಅವರ ವಯಸ್ಸು ಮೀರುತ್ತಿರುವುದರಿಂದ ಸೇವಾ ಭದ್ರತೆ ಖಾಯಂಗೊಳಿಸಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ