ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಗೆದ್ದು ಬೀರಿತ್ತು. ಈ ಗೆಲುವಿನ ಸಂಭ್ರಮದಲ್ಲಿರುವ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಇದ್ದು, ಇದನ್ನು ನಿಭಾಯಿಸುವ ದೊಡ್ಡ ಜವಾಬ್ದಾರಿ ರಾಹುಲ್ಗೆ ಇದೆ.
ಇಂದು ನಡೆಯುವ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಯಶಸ್ವಿಯಾಗಿತ್ತು. ಈ ರಾಜ್ಯದಲ್ಲಿ ಕಾಂಗ್ರೆಸ್ನ ಅನುಭವಿ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಹಾಗಾಗಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸವಾಲು ರಾಹುಲ್ಗಿದೆ.
ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕಮಲ್ನಾಥ್ ಇಬ್ಬರೂ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದಾರೆ. ಇನ್ನು, ಚತ್ತೀಸ್ಗಢದಲ್ಲಿ ಭೂಪೇಶ್ ಭಾಗೇಲ್ ಹಾಗೂ ಟಿಎಸ್ ಸಿಂಗ್ ಡಿಯೋ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದಾರೆ. ಇವರಲ್ಲಿ ರಾಹುಲ್ ಯಾರಿಗೆ ಸಿಎಂ ಪಟ್ಟ ನೀಡಲಿದ್ದಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಈಗಾಗಲೇ ಸಿಎಂ ಹುದ್ದೆಯ ರೇಸ್ನಲ್ಲಿರುವ ಎಲ್ಲರೂ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಪಕ್ಷದ ಹೈಕಮಾಂಡ್ ಆಯ್ಕೆಯನ್ನು ನಾವೆಲ್ಲರೂ ಸ್ವೀಕರಿಸುವುದಾಗಿ ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ. ಅದಾಗ್ಯೂ ತಮ್ಮಿಷ್ಟದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡದಿದ್ದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮುಖ್ಯಮಂತ್ರಿ ಹುದ್ದೆ ಹಂಚಿಕೆ ಆಗದ ಮೊದಲೇ ವಿಜಯ್ ಮಲ್ಯಾ ಟ್ವೀಟ್ ಮಾಡಿದ್ದು, ಸಚಿನ್ ಪೈಲಟ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾಗೆ ಅಭಿನಂದನೆ ತಿಳಿಸಿದ್ದಾರೆ. ಹಾಗಾಗಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ರಾಹುಲ್ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂಬುದು ಇವರಿಗೆ ತಿಳಿದಿದೆಯೇ ಎನ್ನುವ ಅನುಮಾನ ಕಾಡಿದೆ.