ಮುಂಬೈ :ಮಾ-೯: ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿರುವ ಮಹಾರಾಷ್ಟ್ರ ರೈತರು ನಾಸಿಕ್ ನಿಂದ ಮುಂಬೈಗೆ ಬೃಹತ್ ಜಾಥಾ ಆರಂಭಿಸಿದ್ದಾರೆ. ಮಹಾರಷ್ಟ್ರ ವಿಧಾನಸಭೆಯ ಮುಂದೆ ಬಂದು ಸೇರಲಿರುವ ಅನ್ನದಾತರು ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದಾರೆ.
ರಾಜ್ಯ ಸರಕಾರ ತಮ್ಮ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಆಗ್ರಹಿಸಿರುವ 30,000ಕ್ಕೂ ಅಧಿಕ ರೈತರು ಈ ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ರೈತರ ಈ ಬೃಹತ್ ಜಾಥಾ ಮಾರ್ಚ್ 12ರಂದು ಮುಂಬೈ ತಲುಪಲಿದ್ದು, ಕೃಷಿ ಸಾಲ ಸಂಪೂರ್ಣ ಮನ್ನಾ ಮಾತ್ರವಲ್ಲದೆ ಸರಕಾರ ರೈತರ ಕೃಷಿ ಭೂಮಿಯನ್ನು ಮೂಲ ಸಕೌರ್ಯ ಯೋಜನೆಗಳಿಗೆಂದು ಬಲವಂತದಿಂದ ಸ್ವಾಧೀನ ಪಡಿಸಿಕೊಳ್ಳಕೂಡದು ಮತ್ತು ರೈತರ ಕೃಷಿ ಉದ್ದೇಶದ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆಗಳಾಗಿವೆ.
ನಾಶಿಕ್ ಕೇಂದ್ರ ಭಾಗದಲ್ಲಿರುವ ಸಿಬಿಎಸ್ ಚೌಕದಿಂದ ರೈತರು ತಮ್ಮ ಪ್ರತಿಭಟನಾ ಜಾಥ ಆರಂಭಿಸಿದ್ದು ಮುಂಬಯಿ – ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು 180 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ. ಇಂದು ಅಖೀಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ದವಳೆ, ಸ್ಥಳೀಯ ಶಾಸಕ ಜೆ ಪಿ ಗಾವಿತ್ ಮತ್ತು ಇತರ ನಾಯಕರ ನೇತೃತ್ವದ ಈ ಜಾಥಾ ಥಾಣೆ ತಲುಪಿದೆ.
ಕಳೆದ ವರ್ಷ ಜೂನ್ನಿಂದ ಈ ತನಕ 1,753 ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ 34,000 ಕೋಟಿ ರೂ.ಗಳ ಶರ್ತಬದ್ಧ ಕೃಷಿ ಸಾಲ ಮನ್ನಾ ಪ್ರಕಟಿಸಿತ್ತು ಎಂದು ದವಳೆ ತಿಳಿಸಿದ್ದಾರೆ.