ಬೆಂಗಳೂರು, ಡಿ.12- ನಗರದಲ್ಲಿ ಇತ್ತೀಚೆಗೆ ಹಗಲು ವೇಳೆಯಲ್ಲಿಯೇ ಮನೆಗಳ್ಳತನ ನಡೆಯುತ್ತಿದ್ದು, ನಿನ್ನೆ ನಾಲ್ಕು ಕಡೆ ಮನೆಯ ಬಾಗಿಲು ಒಡೆದು ಹಣ-ಆಭರಣ ಮತ್ತಿತರ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಸಿಕೆ ಅಚ್ಚುಕಟ್ಟು: ಬನಶಂಕರಿಯಯಲ್ಲಪ್ಪ ಗಾರ್ಡನ್ ನಿವಾಸಿ ಲಲಿತಾ ಎಂಬುವವರು ನಿನ್ನೆ ಬೆಳಗ್ಗೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಬೀರುವನ್ನು ಮೀಟಿ 4 ಲಕ್ಷ ಹಣ ಹಾಗೂ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.
ವಿವೇಕನಗರ: ಇಟಿಎಸ್ ಲೇಔಟ್‍ನ 7ನೆ ಮುಖ್ಯರಸ್ತೆ, 3ನೆ ಕ್ರಾಸ್‍ನಲ್ಲಿರುವ ಕಾಮಧೇನು ಅಪಾರ್ಟ್‍ಮೆಂಟ್‍ನ ಮೊದಲನೆ ಮಹಡಿಯಲ್ಲಿ ವಾಸವಿರುವ ಚಲುವರಾಜು ಎಂಬುವವರ ಕುಟುಂಬದವರು ನಿನ್ನೆ ಬೆಳಗ್ಗೆ ಹೊರಗೆ ಹೋಗಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಡೋರ್‍ಲಾಕ್ ತೆಗೆದು ಒಳನುಗ್ಗಿ 40 ಸಾವಿರ ಹಣ ಹಾಗೂ 50 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಸಂಜೆ ಚಲುವರಾಜು ಕುಟುಂಬ ಮನೆಗೆ ಹಿಂದಿರುಗಿದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಎಚ್‍ಎಎಲ್: ರಮೇಶ್‍ನಗರದ 5ನೆ ಕ್ರಾಸ್ ನಿವಾಸಿ ರಾಜೇಶ್ ಎಂಬುವವರು ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ 20 ಸಾವಿರ ಹಣ ಹಾಗೂ ಭಾರೀ ಬೆಲೆಯ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ್ದಾರೆ.
ಸೋಲದೇವನಹಳ್ಳಿ: ಚಿಕ್ಕಬಾಣಾವರದ ನಿವಾಸಿ ಉಲ್ಲಾಸ್ ಎಂಬುವವರು ನಿನ್ನೆ ಬೆಳಗ್ಗೆ ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಕಳ್ಳತನ ನಡೆಸಿದ್ದು, ಕಳುವಾಗಿರುವ ವಸ್ತುಗಳ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.
ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.