ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ, ಮಾಜಿ ಸಿ.ಎಂ.ಯಡಿಯೂರಪ್ಪ

ಬೆಳಗಾವಿ(ಸುವರ್ಣಸೌಧ), ಡಿ.11- ಚುನಾವಣೆಯಲ್ಲಿ ಜನರಿಗೆ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಆರು ತಿಂಗಳಾದರೂ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವುದರಿಂದ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ವಿಧಾನಸಭೆಯಲ್ಲಿಂದು ಬರ ಪರಿಸ್ಥಿತಿ ಕುರಿತು ನಿಲುವಳಿ ಸೂಚನೆ ಪ್ರಸ್ತಾವನೆ ಸಂದರ್ಭದಲ್ಲಿ ಜೆಡಿಎಸ್ ಪ್ರಣಾಳಿಕೆಯ ಭರವಸೆಗಳನ್ನು ಓದಿ, ಜನತೆ ನಿಮಗೆ ಮತ ನೀಡಲಿಲ್ಲ. ಕೇವಲ 36 ಸ್ಥಾನದಲ್ಲಿ ಚುನಾಯಿತರಾಗಿದ್ದೀರಿ. ನಿಮಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರು ಕೈ ಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿರುವಂತೆ ಮಾಡಿ, ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ವಿಫಲರಾಗಿದ್ದೀರಿ.100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಎಂದು ಘೋಷಣೆ ಮಾಡಿದ್ದೀರಿ.ಇನ್ನೂ 20 ರಿಂದ 25 ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ವಾಡಿಕೆ ಮಳೆಗಿಂತ ಶೇ.40 ರಿಂದ 72ರಷ್ಟು ಕಡಿಮೆ ಮಳೆಯಾಗಿದೆ ಎಂದು ಅಂಕಿ ಅಂಶಗಳನ್ನು ಸದನದ ಮುಂದಿಟ್ಟರು.

ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಯಾದಿಯಾಗಿ ಯಾವುದೇ ಸಚಿವರು ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಿ ಪರಿಹಾರ ಕಾರ್ಯ ಕುರಿತಂತೆ ಚರ್ಚೆ ನಡೆಸಿಲ್ಲ. ಬರ ಪೀಡಿತ ತಾಲ್ಲೂಕುಗಳಿಗೆ 50 ಲಕ್ಷ ರೂ. ಮಂಜೂರು ಮಾಡಿದ್ದೀರಿ. ಹಳೆ ಬಾಕಿಗೆ ಈ ಹಣ ಹೊಂದಾಣಿಕೆಯಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪರಿಸ್ಥಿತಿ ಸುಧಾರಣೆಗೆ ನೈಜ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದೀರಿ ಎಂದು ಆರೋಪಿಸಿದರು.

ಮಾಸಾಶನ ಹೆಚ್ಚಿಸುವ ಭರವಸೆ ನೀಡಲಾಗಿತ್ತು.ಅದು ಈಡೇರಿಲ್ಲ. ಸಾಲ ಮನ್ನಾದ ಭರವಸೆಯೂ ಜನರಿಗೆ ತಲುಪಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ನೀಡುವ ವಿಷಯದಲ್ಲೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಶಾಲಾ ಮಕ್ಕಳಿಗೆ ಬಸ್ ಪಾಸ್ ನೀಡುವುದರಲ್ಲೂ ಸರ್ಕಾರ ಎಡವಿದೆ.ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಗಿಟ್ಟಿಸುವ ನೀಚ ಕೆಲಸವನ್ನು ಸರ್ಕಾರ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.

ಮುಂದಿನ ನಾಲ್ಕೂವರೆ ವರ್ಷದಲ್ಲಿ ರೈತರ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿದೆ.ಆವರೆಗೆ ಯಾರು ಇರುತ್ತಾರೋ ಹೋಗುತ್ತಾರೋ ಗೊತ್ತಿಲ್ಲ. ನಿಮ್ಮ ನಿರ್ಧಾರದಿಂದ ರೈತರ ಬದುಕು ಸಂಕಷ್ಟಕ್ಕೀಡಾಗಿದೆ.ಬ್ಯಾಂಕುಗಳು ಹೊಸ ಸಾಲ ನೀಡುತ್ತಿಲ್ಲ. ಈಗಾಗಲೇ ಪಡೆದಿರುವ ಸಾಲವೂ ತೀರಿಲ್ಲ. ಅದಕ್ಕೆ ಬಡ್ಡಿ ಬೆಳೆಯುತ್ತಿದೆ. ಅದನ್ನು ಪಾವತಿಸುವವರು ಯಾರು ? ಅಸಲು ತೀರಿಸುವವರು ಯಾರು ?ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಮನ್ನಾಗೆ ಒಪ್ಪಿವೆಯೇ, ಬಡ್ಡಿ ಮನ್ನಾ ಮಾಡಲು ಸಮ್ಮತಿಸಿವೆಯೇ ಎಂದು ಪ್ರಶ್ನಿದರು.

ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡಬಾರದು ಎಂದು ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.ರೈತರ ಸಾಲ ಮನ್ನಾಗೆ ಸ್ವಾಗತವಿದೆ. ಅದರ ಎಲ್ಲಾ ಅಂಶಗಳ ಬಗ್ಗೆಯೂ ಕೂಲಕಂಷವಾಗಿ ಅಧ್ಯಯನ ಮಾಡಿ ಸಮರ್ಪಕವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಮಾಹಿತಿ, ಅನುಮತಿಯೊಂದಿಗೆ ತೀರ್ಮಾನ ಪ್ರಕಟಿಸಬೇಕಿತ್ತು.ಆದರೆ ಆ ರೀತಿಯ ಯಾವ ಮುಂಜಾಗೃತೆಯನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

ಕಾಂಗ್ರೆಸ್ ಜೆಡಿಎಸ್‍ನ್ನು ಹೇಗೆ ಸಹಿಸಿಕೊಂಡಿದೆ.ಚುನಾವಣೆಯ ಮೊದಲು ಜೆಡಿಎಸ್ ನೀಡಿದ್ದ ಭರವಸೆಗಳ ಪ್ರಣಾಳಿಕೆಯನ್ನು ಕಾಂಗ್ರೆಸ್‍ನವರು ಓದಿಲ್ಲವೇ, ಅದು ಈಗ ಈಡೇರಿದೆಯೇ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ ಇಲಾಖೆಯ ಪ್ರತಿ ಕಚೇರಿಯಿಂದ ಪ್ರತಿ ತಿಂಗಳು ಕೋಟ್ಯಂತರ ಹಣ ನೀಡಬೇಕು ಎಂಬ ಒತ್ತಡ ಹೇರಿ ಕಪ್ಪ ವಸೂಲಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ನೀರಾವರಿ, ಸಮಾಜ ಕಲ್ಯಾಣ ಸೇರಿದಂತೆ 12 ಸಾವಿರ ಕೋಟಿ ಬಿಲ್ ಬಾಕಿ ಇದೆ.ಅಭಿವೃದ್ಧಿ ಹಿನ್ನೆಡೆಯಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ