ಪ್ರಯಾಗ್ರಾಜ್ (ಉತ್ತರ ಪ್ರದೇಶ): ನೆನ್ನೆ ಸಂಜೆ ಪ್ರಯಾಗ್ರಾಜ್ನ ಸಂಗಮ ಹತ್ತಿರದ ಯಮುನಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ ಮೂವರು ಮಹಿಳೆಯರು ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಹಾಗೂ ಮೂವರು ಕಣ್ಮರೆಯಾಗಿದ್ದಾರೆ. ದುರಂತಕ್ಕಿಡಾದ ಈ ದೋಣಿಯಲ್ಲಿ ಒಟ್ಟು 14 ಜನ ಪ್ರಯಾಣ ಮಾಡುತ್ತಿದ್ದರು, ಅವರಲ್ಲಿ ಆರು ಜನರನ್ನು ರಕ್ಷಿಸಲಾಗಿದೆ, ಐದು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಹಾಗೂ ಕಾಣೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಇವರೆಲ್ಲರೂ ತಮ್ಮ ಸಂಬಂಧಿಯ ಚಿತಾಭಸ್ಮವನ್ನು ವಿಸರ್ಜನೆ ಮಾಡಲು ಮಹಾರಾಷ್ಟ್ರದಿಂದ ಬಂದಿದ್ದರು ಎಂದು ಪೊಲೀಸರು ಹೇಳಿದರು. ಈ ದುರಂತದಲ್ಲಿ ಬದುಕುಳಿದವರ ಪ್ರಕಾರ, ದೋಣಿಯಲ್ಲಿ ಸಣ್ಣ ರಂದ್ರ ಉಂಟಾಗಿ ಅದರ ಮೂಲಕ ನೀರು ಬರಲಾರಂಭಿಸಿತು ಎಂದು ಹೇಳಿದರು.
ಈ ಘಟನೆಯ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.