ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನ ಮಂಗಳವಾರದಿಂದ ಆರಂಭವಾಗಲಿದ್ದು, ಅಧಿವೇಶನದಲ್ಲಿ ನೆನೆಗುದಿಗೆ ಬಿದ್ದಿರುವ ತ್ರಿವಳಿ ತಲಾಖ್ ಸೇರಿದಂತೆ ಇನ್ನಿತರೆ ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಸಜ್ಜಾಗಿದೆ.
ಅಧಿವೇಶನದಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ, ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ಸಿಬಿಐ ಉನ್ನತಾಧಿಕಾರಿಗಳ ಕಚ್ಚಾಟ, ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ವಿರುದ್ದ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಿದ್ಧಗೊಂಡಿವೆ.
ಇನ್ನು ವಿಜಯ್ ಮಲ್ಯ ಹಾಗೂ ಕ್ರಿಸ್ಟಿಯನ್ ಮಿಶೆಲ್ ಗಡಿಪಾರು ವಿಷಯಗಳನ್ನು ನಗದೀಕರಣ ಮಾಡಿಕೊಂಡು ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ.
ಡಿ.11ರಿಂದ ಜ.8ರವರೆಗೆ ಅಧಿವೇಶನ ನಡೆಯಲಿದ್ದು, ಚಳಿಗಾಲದ ಮೊದಲ ದಿನವಾದ ಇಂದು ಕಲಾಪದಲ್ಲಿ ಇತ್ತೀಚೆಗಷ್ಟೇ ಅಗಲಿದ ಬಿಜೆಪಿ ನಾಯಕರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಲ್ಲದೆ ಅದೇ ದಿನವೇ ಲೋಕಸಭೆ ಚುನಾವಣೆಯ ಸೆಮೆಫೈನಲ್ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕಲಾಪದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಈ ಕಲಾಪದಲ್ಲಿ ತ್ರಿವಳಿ ತಲಾಖ್ ಆಚರಣೆ ಮುಂದುವರೆಸಿದರೆ ಶಿಕ್ಷೆ ವಿಧಿಸುವ ಮಸೂದೆ, ಕಂಪನಿಗಳ ಕಾಯ್ದೆ ತಿದ್ದುಪಡಿ ಮಸೂದೆ, ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.