ಲಂಡನ್: ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ಸಮ್ಮತಿ ನೀಡಿದೆ. ಈ ಮೂಲಕ ಭಾರತದ ಮನವಿಗೆ ಜಯಸಿಕ್ಕಂತಾಗಿದೆ.
ಭಾರತದ ಬ್ಯಾಂಕ್ಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಲಂಡನ್ ಗೆ ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಹಸ್ತಾಂತರ ಮಾಡಬೇಕೆಂದು ಭಾರತ ಲಂಡನ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಇಲ್ಲಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಪ್ರೇಟ್ಸ್ ಕೋರ್ಟ್ನಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು ಮಲ್ಯ ಗಡಿಪಾರಿಗೆ ಅನುಮತಿ ನೀಡಿದ್ದಾರೆ. ಇನ್ನು ತೀರ್ಪು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.
ಲಂಡನ್ ಕೋರ್ಟ್ನ ತೀರ್ಪನ್ನು ಸಿಬಿಐ ಸ್ವಾಗತಿಸಿದೆ. ವಿಜಯ್ ಮಲ್ಯ ಅವರ ಪ್ರಕರಣದಲ್ಲಿ ನಾವು ತುಂಬ ಶ್ರಮಪಟ್ಟಿದ್ದೇವೆ. ಸತ್ಯ ಹಾಗೂ ಕಾನೂನು ಬದ್ಧವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದೆ.
ಈ ನಡುವೆ ವಿಜಯ್ ಮಲ್ಯ ಅವರ ಗಡಿಪಾರು ಬಗ್ಗೆ ಲಂಡನ್ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತಕ್ಕೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ವಿಜಯ್ ಮಲ್ಯ ಪ್ರಕರಣವೇ ಸಾಕ್ಷಿ. ಇಲ್ಲಿನ ಜನರು, ಆರ್ಥಿಕತೆಗೆ ವಂಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದೊಂದು ಪಾಠವಾಗಲಿ ಎಂದು ಹೇಳಿದ್ದಾರೆ.
Vijay Mallya, To Be Extradited, London Court