ಬೆಂಗಳೂರು, ವಿಧಾನಸೌಧದ ಮುಂಭಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು 167 ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸಿಒ.ಎಂ. ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇನ್ನು ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಭೂಕಂಪವಾಗಲಿದೆ.ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜಕೀಯ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂತಹ ಹೇಳಿಕೆಗಳು ಪ್ರತಿಕ್ರಿಯೆ ನೀಡಲು ಅರ್ಹವಾದ ವಿಷಯಗಳಲ್ಲ ಎಂದು ತಳ್ಳಿ ಹಾಕಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಮೊದಲ ಕಂತಿನಲ್ಲಿ 167 ಫಲಾನುಭವಿಗಳಿಗೆ ಒಟ್ಟು ಏಳೂವರೆ ಲಕ್ಷ ರೂ. ಮೌಲ್ಯದ ವಾಹನಗಳನ್ನು ಹಂಚಿಕೆ ಮಾಡಲಾಗಿದೆ.ಅದರಲ್ಲಿ ಸರ್ಕಾರದ ಸಹಾಯಧನ ಮೂರುವರೆ ಲಕ್ಷ ರೂ.ಗಳಷ್ಟಿದೆ. ಸಹಾಯಧನಕ್ಕಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನಾಲ್ಕರಿಂದ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವಾಹನಗಳ ಮೂಲಕ ಅಲ್ಪಸಂಖ್ಯಾತ ಸಮುದಾಯದ ಯುವಜನತೆ ತಮ್ಮ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ.ಮುಸಲ್ಮಾನ, ಕ್ರೈಸ್ತ, ಜೈನ, ಸಿಖ್ ಸಮುದಾಯದ ಯುವಕರಿಗೆ ಇದರಿಂದ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಯುವಕರಿಗೆ ಟ್ಯಾಕ್ಸಿ ಮತ್ತು ಸರಕು ಸಾಗಣೆ ವಾಹನ ನೀಡುವ ಸಲುವಾಗಿ 2017-18ನೇ ಸಾಲಿನಲ್ಲಿ 15 ಕೋಟಿ ಮೀಸಲಿರಿಸಲಾಗಿತ್ತು.ಅದರಲ್ಲಿ 500 ವಾಹನಗಳನ್ನು ಖರೀದಿಸಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ನಸೀರ್ ಅಹಮ್ಮದ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.