ಬೆಂಗಳೂರು, ಡಿ.5- ಬಿಬಿಎಂಪಿಯ ಪ್ರಮುಖ ಸ್ಥಾಯಿ ಸಮಿತಿ ಸದಸ್ಯತ್ವಕ್ಕಾಗಿ ಬಿಜೆಪಿ ಶಾಸಕರಾದ ಆರ್.ಅಶೋಕ್ ಹಾಗೂ ಸತೀಶ್‍ರೆಡ್ಡಿ ನಡುವೆ ವಾಗ್ವಾದ ನಡೆದು ಆ ಪಕ್ಷದ ಸದಸ್ಯರಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಏರುಧ್ವನಿಯಲ್ಲಿ ಆರ್.ಅಶೋಕ್ ಹಾಗೂ ಸತೀಶ್‍ರೆಡ್ಡಿ ಗಲಾಟೆ ಮಾಡಿಕೊಂಡಿದ್ದನ್ನು ಕಂಡು ಸಂಸದ ಪಿ.ಸಿ.ಮೋಹನ್ ಮತ್ತಿತರ ಬಿಜೆಪಿ ನಾಯಕರು ಎಲ್ಲರನ್ನೂ ಬಿಜೆಪಿ ಕೊಠಡಿಗೆ ಕರೆದೊಯ್ದು ಸಮಾಧಾನಮಾಡಲು ಯತ್ನಿಸಿದರು.
ತಮ್ಮ ಕ್ಷೇತ್ರದ ಸದಸ್ಯರಿಗೆ ಪ್ರಮುಖವಾದ ತೆರಿಗೆ-ಆರ್ಥಿಕ ಸ್ಥಾಯಿ ಸಮಿತಿ, ನಗರ ಯೋಜನೆ ಸಮಿತಿಗಳ ಸದಸ್ಯತ್ವ ಬಿಟ್ಟುಕೊಡಬೇಕೆಂದು ಸತೀಶ್‍ರೆಡ್ಡಿ ಪಟ್ಟು ಹಿಡಿದರು.
ಈಗ ಅದೆಲ್ಲ ಮುಗಿದುಹೋಗಿದೆ.ಮುಂದಿನ ವರ್ಷ ನೋಡೋಣ ಎಂದು ಆರ್.ಅಶೋಕ್ ಹೇಳಿದ್ದರಿಂದ ಸತೀಶ್‍ರೆಡ್ಡಿ ಗರಂ ಆಗಿ ಪ್ರತಿವರ್ಷ ನಮಗೆ ಹೀಗೇ ಆಗುತ್ತಿದೆ.ಈ ಬಾರಿಯಾದರೂ ನಾನು ಕೇಳಿದ ಸಮಿತಿಗಳಿಗೆ ನಮ್ಮ ಸದಸ್ಯರಿಗೆ ಹೆಚ್ಚು ಸ್ಥಾನ ಬಿಟ್ಟುಕೊಡಬೇಕು.ಇಲ್ಲದಿದ್ದರೆ ಯಾವುದೇ ಸಮಿತೀನೂ ನಮಗೆ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಿದರು.ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೊಕ್, ಐದು ಮಂದಿ ಪಕ್ಷೇತರ ಸದಸ್ಯರು ನಮ್ಮ ಬಳಿ ಬಂದು ಉಪಮೇಯರ್ ಅಭ್ಯರ್ಥಿ ಆಗುತ್ತೇವೆ ಎಂದು ಹೇಳಿಕೊಂಡರು.ಹೀಗಾಗಿ ಸಂಖ್ಯಾಬಲ ಹೆಚ್ಚುವುದರಿಂದ ನಮ್ಮ ಪಕ್ಷದಿಂದ ಉಪಮೇಯರ್ ಅಭ್ಯರ್ಥಿ ಹಾಕುತ್ತೇವೆ ಎಂದು ನಾವು ಘೋಷಿಸಿದೆವು.ಆದರೆ, ಕೊನೆ ಗಳಿಗೆಯಲ್ಲಿ ಪಕ್ಷೇತರ ಸದಸ್ಯರು ತಮ್ಮ ಹಳೆ ಚಾಳಿ ಮುಂದುವರಿಸಿ ಕಾಂಗ್ರೆಸ್-ಜೆಡಿಎಸ್ ಕಡೆ ಹೋದರು.ಹಾಗಾಗಿ ನಾವು ಉಪಮೇಯರ್ ಚುನಾವಣೆಯಿಂದ ಹಿಂದೆ ಸರಿದೆವು ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲೂ ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅದೇ ರೀತಿ ಬಿಬಿಎಂಪಿಯಲ್ಲೂ ಪ್ರತಿಪಕ್ಷದಲ್ಲೇ ಮುಂದುವರಿಯುತ್ತೇವೆ. ಜನರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ನಮಗೆ ಸಿಗುವುದಿಲ್ಲ. ಸದಸ್ಯತ್ವ ಸ್ಥಾನಗಳು ನಮಗೆ ಸಿಗುತ್ತವೆ. ನನ್ನ ಮತ್ತು ಶಾಸಕ ಸತೀಶ್‍ರೆಡ್ಡಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ ಬಾರಿ ಮೇಯರ್ ಸ್ಥಾನ ಕೂದಲೆಳೆ ಅಂತರದಲ್ಲಿ ಕೈ ತಪ್ಪಿತ್ತು.ಈ ಬಾರಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕೆಂದು ಸತೀಶ್‍ರೆಡ್ಡಿ ಏರುಧ್ವನಿಯಲ್ಲಿ ಹೇಳಿದರು.ಇದನ್ನೇ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ಎಂದು ಬಿಂಬಿಸಲಾಗಿದೆ.ಆದರೆ, ಅಂತಹದ್ದೇನೂ ನಡೆದಿಲ್ಲ ಎಂದು ಅಶೋಕ್ ಹೇಳಿದರು.
ಇದೇ ವೇಳೆ ಸತೀಶ್‍ರೆಡ್ಡಿ ಕೂಡ ಮಾತನಾಡಿ, ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಶೋಕ್ ಅವರು ನನಗೆ ಅಣ್ಣ ಇದ್ದಂತೆ.ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕೆಂದು ಸ್ವಲ್ಪ ಜೋರಾಗಿ ಹೇಳಿದೆ.ಅದು ಬಿಟ್ಟರೆ ಬೇರೆ ಏನೂ ಜಗಳವಾಗಿಲ್ಲ. ನಾವೆಲ್ಲರೂ ಸ್ನೇಹದಿಂದಿದ್ದೇವೆ ಎಂದು ಹೇಳಿದರು.