ಬೆಂಗಳೂರು,ಡಿ.5- ರಾಜ್ಯದ ಪ್ರಮುಖ ನದಿಗಳ ನೀರಿನ ಸದ್ಬಳಕೆ ಹಾಗೂ ಜಲ ವಿವಾದಗಳ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಜಲಸಂಪನ್ಮೂಲ ಸಚಿವರುಗಳ ಸಭೆಯನ್ನು ನಾಳೆ ರಾಜ್ಯ ಸರ್ಕಾರ ನಡೆಸಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಇತರೆ ಜಲಾನಯನ ಭಾಗದಲ್ಲಿ ನೀರಿನ ಸಮಪರ್ಕ ಬಳಕೆ ಹಾಗೂ ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ.
ನಾಳೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನದಿ ನೀರು ಬಳಕೆ ಮತ್ತು ಜಲ ವಿವಾದಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿ ರಾಜ್ಯ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ.
ಜಲವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳುವುದು, ಕಾನೂನು ಹೋರಾಟ ಮುಂದುವರೆಸುವುದು ಹಾಗೂ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಸಂಪೂರ್ಣ ಬಳಕೆಗೆ ಯೋಜನೆ ರೂಪಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಮತ್ತು ನೀರಾವರಿ ಸಚಿವರುಗಳಿಂದ ಸಲಹೆ ಮತ್ತು ಅಭಿಪ್ರಾಯವನ್ನು ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿಗಳು ಈ ಸಭೆಯನ್ನು ಕರೆದಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು, ್ತ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.