ಬೆಂಗಳೂರು,ಡಿ.5- ಡಿಸೆಂಬರ್ ತಿಂಗಳೊಳಗೆ ಕರ್ನಾಟಕದಲ್ಲಿ ಏನು ಬೇಕಾದರೂ ನಡೆಯಬಹುದೆಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ ಎಂಬ ವದಂತಿಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಪ್ರಕಾಶ್ ಜಾವ್ಡೇಕರ್ ಅವರ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.
ಒಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳೆದ ನಾಲ್ಕು ದಿನಗಳಿಂದ ಕೇರಳದಲ್ಲಿ ವಿಶ್ರಾಂತಿ ನೆಪದಲ್ಲಿ ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆ, ಮತ್ತೊಂದೆಡೆ ಶಾಸಕ ಶ್ರೀರಾಮುಲು ಆಪ್ತರೊಬ್ಬರು ದುಬೈ ಉದ್ಯಮಿ ಜೊತೆ ಆಡಳಿತಾರೂಢ ಪಕ್ಷದ ಶಾಸಕರನ್ನು ಸೆಳೆಯಲು ನಡೆಸಿರುವ ದೂರವಾಣಿ ಸಂಭಾಷಣೆ ಬಹಿರಂಗಗೊಂಡಿರುವ ಬೆನ್ನಲ್ಲೇ ಪ್ರಕಾಶ್ ಜಾವ್ಡೇಕರ್ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕರ್ನಾಟಕ ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಧಮಾಕ ಆಗುವುದು ನೂರಕ್ಕೆ ನೂರರಷ್ಟು ಗ್ಯಾರಂಟಿ. ಆದರೆ ಅದು ಯಾವಾಗ ಆಗುತ್ತದೆ, ಹೇಗೆ ಆಗುತ್ತದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಅದನ್ನು ನಮ್ಮ ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರು ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ.
ಕರ್ನಾಟಕದಲ್ಲಿ ತಾಳಮೇಳ ಇಲ್ಲದ ಸರ್ಕಾರ ರಚನೆಯಾಗಿದೆ.ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಕಾರಣಕ್ಕಾಗಿ ವಿಧಾನಸಭೆ ಚುನಾವಣೆಗೂ ಮುನ್ನ ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ಕಾಂಗ್ರೆಸ್-ಜೆಡಿಎಸ್ ಕುರ್ಚಿಗಾಗಿ ಸರ್ಕಾರ ರಚಿಸಿವೆ.
ಇಲ್ಲಿ ತತ್ವ ಸಿದ್ದಾಂತಗಳಾಗಲಿ, ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ನಡುವೆ ಹೊಂದಾಣಿಕೆ ಇಲ್ಲ. ಕೇವಲ ಅಧಿಕಾರಕ್ಕಾಗಿ ಮಾತ್ರ ಮೇಲ್ನೋಟಕ್ಕೆ ದೋಸ್ತಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲೂ ಜೆಡಿಎಸ್‍ಗೆ ಅನೇಕ ಕಡೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿಲ್ಲ. ಇದೇ ರೀತಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‍ಗೆ ಬಹಳಷ್ಟು ಕಡೆ ಬೆಂಬಲ ಸೂಚಿಸಿಲ್ಲ. ಈಗಲೂ ಅನೇಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ.ಇದು ಹೊಂದಾಣಿಕೆ ಸರ್ಕಾರ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ನಾಯಕತ್ವವನ್ನು ಮೆಚ್ಚಿ 104 ಸ್ಥಾನಗಳನ್ನು ನೀಡಿದ್ದರು. ಸರ್ಕಾರ ರಚಿಸಲು ನಮಗೆ ಕೆಲವೇ ಕೆಲವು ಸಂಖ್ಯೆಗಳ ಕೊರತೆ ಎದುರಾಯಿತು.ನಾವು ಆಪರೇಷನ್ ಕಮಲ ಮಾಡಬೇಕಾದ ಅಗತ್ಯವಿಲ್ಲ. ಅದು ಯಾವಾಗ, ಹೇಗೆ ನಡೆಯುತ್ತದೆ ಎಂಬುದನ್ನು ನೀವೆ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಬಿಎಸ್‍ವೈ ಹೆಗಲಿಗೆ: ಇನ್ನು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ಬಿಜೆಪಿ ವರಿಷ್ಠರು ಯಡಿಯೂರಪ್ಪನವರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸರ್ಕಾರ ರಚನೆ ಮಾಡಬೇಕೆ ಇಲ್ಲವೇ ಲೋಕಸಭೆ ಚುನಾವಣೆವರೆಗೂ ಕಾದು ನೋಡಿ, ರಚನಾತ್ಮಕವಾಗಿ ಕೆಲಸ ಮಾಡಬೇಕೆ ಎಂಬುದನ್ನು ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪನವರೇ ತೀರ್ಮಾನಿಸಬೇಕು.ಈ ವಿಷಯದಲ್ಲಿ ಕೇಂದ್ರ ವರಿಷ್ಠರು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ನೀವು ಸ್ವತಂತ್ರರು. ಬಿಎಸ್‍ವೈ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲ ಶಾಸಕರು ಮತ್ತು ಪಕ್ಷದ ಮುಖಂಡರು ಬದ್ಧರಾಗಿರಬೇಕೆಂದು ಸೂಚಿಸಲಾಗಿದೆ.
ಸೋಮವಾರದಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದೊಳಗೆ ಇಲ್ಲವೇ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಆಪರೇಷನ್ ಕಮಲದ ರೂಪುರೇಷೆಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.