ಬೆಂಗಳೂರು, ಡಿ.4- ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆ ಸಂಬಂಧ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಹಮತ ವ್ಯಕ್ತವಾಗಿದ್ದರೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗಾಗಿ ಹಗ್ಗ-ಜಗ್ಗಾಟ ಮುಂದುವರಿದಿದೆ.
ಮೊದಲ ಎರಡು ವರ್ಷ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಕಳೆದ ವರ್ಷ ಜೆಡಿಎಸ್ ಪಾಲಾಗಿತ್ತು.ಈ ಬಾರಿಯೂ ನಮಗೆ ಈ ಸಮಿತಿ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.ಆದರೆ, ಕಾಂಗ್ರೆಸ್ ಸಮಿತಿಯನ್ನು ಮತ್ತೆ ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಒತ್ತಡ ಹೇರುತ್ತಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಪ್ರಸ್ತುತ ಆಯಾ ಪಕ್ಷಗಳ ವಶದಲ್ಲಿದ್ದ ಸಮಿತಿಗಳನ್ನೇ ಈ ಬಾರಿಯೂ ಮುಂದುವರಿಸಿಕೊಂಡು ಹೋಗಲು ಸಹಮತ ವ್ಯಕ್ತವಾಗಿತ್ತು.
ಆದರೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪಡೆದುಕೊಳ್ಳಲು ಎರಡು ಪಕ್ಷಗಳ ನಡುವೆ ಹಗ್ಗ-ಜಗ್ಗಾಟ ಮುಂದುವರಿದಿದ್ದು, ಇಂದು ಸಂಜೆ ನಡೆಯಲಿರುವ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ತೆರಿಗೆ ಸಮಿತಿ ಯಾವ ಪಕ್ಷಕ್ಕೆ ಒಲಿಯಲಿದೆ ಎಂಬುದು ತಿಳಿಯಲಿದೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟರೆ ಆ ಸಮಿತಿಯಷ್ಟೇ ಪ್ರಮುಖವಾಗಿರುವ ನಗರ ಯೋಜನೆ ಸ್ಥಾಯಿಸಮಿತಿಯನ್ನು ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಮುಖಂಡರು ಜೆಡಿಎಸ್ಗೆ ಭರವಸೆ ನೀಡಿದ್ದಾರೆ.
ಒಂದು ವೇಳೆ ತೆರಿಗೆ ಸಮಿತಿ ಜೆಡಿಎಸ್ ಪಾಲಾದರೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು ಆ ಸಮಿತಿಯ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ತೆರಿಗೆ ಸಮಿತಿ ಕಾಂಗ್ರೆಸ್ ಪಾಲಾದರೆ ಶಾಂತಿನಗರ ವಾರ್ಡ್ನ ಹಿರಿಯ ಸದಸ್ಯೆ ಸೌಮ್ಯ ಶಿವಕುಮಾರ್ ಅವರು ಅಧ್ಯಕ್ಷರಾಗುವ ಲಕ್ಷಣಗಳು ಕಂಡುಬರುತ್ತಿವೆ.
ಉಪಮೇಯರ್ ರೇಸ್ನಲ್ಲಿದ್ದ ವಿಶ್ವನಾಥ್ ನಾಗೇನಹಳ್ಳಿ ವಾರ್ಡ್ನ ರಾಜಶೇಖರ್ ಅವರಿಗೆ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, ಬಿನ್ನಿಪೇಟೆ ವಾರ್ಡ್ನ ಐಶ್ವರ್ಯ ನಾಗರಾಜ್ ಅವರಿಗೆ ಶಿಕ್ಷಣ ಸಮಿತಿ ಸಿಗುವ ಸಾಧ್ಯತೆಗಳಿದ್ದು, ಉಳಿದ ತೋಟಗಾರಿಕಾ ಸಮಿತಿಗಾಗಿ ನಾಜೀಮಾ ಖಾನಂ, ಉಮ್ಮೇ ಸಲ್ಮಾ ಅವರ ನಡುವೆ ಫೈಟ್ ನಡೆಯುವ ಸಾಧ್ಯತೆಗಳಿವೆ.
ಇನ್ನು ಕಾಂಗ್ರೆಸ್ ಬಳಿ ಉಳಿದುಕೊಳ್ಳುವ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಲಾವಣ್ಯ ಗಣೇಶ್ರೆಡ್ಡಿ ಅವರಿಗೆ, ಸಾಮಾಜಿಕ ನ್ಯಾಯ ಸಮಿತಿಗೆ ಲತಾ ರಾಥೋಡ್ ಕುವರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಚ್ಚಳವಾಗಿದೆ.
ಉಳಿದಂತೆ ಮಾರುಕಟ್ಟೆ, ಅಫೀಲು ಸ್ಥಾಯಿ ಸಮಿತಿಗಳನ್ನು ನಮ್ಮ ಕ್ಷೇತ್ರಕ್ಕೆ ಬಿಟ್ಟುಕೊಡುವಂತೆ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಕೇಶವಮೂರ್ತಿ, ಆರ್ಯ ಶ್ರೀನಿವಾಸ್, ವಾಸುದೇವಮೂರ್ತಿ, ವೇಲು ನಾಯ್ಕರ್ ಅವರ ನಡುವೆ ಜಂಗಿಕುಸ್ತಿ ಆರಂಭವಾಗಿದೆ.
ಪಕ್ಷೇತರರಿಗೆ ಈ ಬಾರಿಯೂ ಮೂರು ಸ್ಥಾಯಿ ಸಮಿತಿಗಳನ್ನು ಬಿಟ್ಟುಕೊಡಲು ಸಮ್ಮತಿಸಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ, ಆರೋಗ್ಯ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳ ಅಧ್ಯಕ್ಷಗಿರಿ ಚಂದ್ರಪ್ಪರೆಡ್ಡಿ, ಲಕ್ಷ್ಮೀನಾರಾಯಣ್ (ಗುಂಡಣ್ಣ) ಹಾಗೂ ಗಾಯತ್ರಿ ಅವರುಗಳಿಗೆ ಒಲಿಯುವ ನಿರೀಕ್ಷೆ ಇದೆ.
ಕಣಕ್ಕಿಳಿಯೋದು ಡೌಟ್: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಉಪಮೇಯರ್ ಅಭ್ಯರ್ಥಿಯಾಗಿ ನಾಗಪುರ ವಾರ್ಡ್ನ ಭದ್ರೇಗೌಡ ಅವರು ಆಯ್ಕೆಯಾಗಿರುವುದರಿಂದ ನಾಳೆ ನಡೆಯಲಿರುವ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಖಾಡಕ್ಕಿಳಿಯೋದು ಅನುಮಾನವಾಗಿದೆ.
ನೂತನವಾಗಿ ವಿಧಾನ ಪರಿಷತ್ಗೆ ಆಯ್ಕೆಯಾದ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವುದರಿಂದ ಬಿಜೆಪಿ ಮತಗಳಿಗಿಂತ ಜೆಡಿಎಸ್, ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರ ಏಳು ಮತಗಳು ಹೆಚ್ಚುವರಿಯಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸಿದರೆ ಮತ್ತೆ ಮುಖಭಂಗವಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಉಪಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಆದರೆ, 12 ಸ್ಥಾಯಿ ಸಮಿತಿಗಳ ಬಿಜೆಪಿ ಸದಸ್ಯರ ಆಯ್ಕೆ ಕುರಿತಂತೆ ಇಂದು ಸಂಜೆ ಸಭೆ ನಡೆಯಲಿದ್ದು, ಯಾವ ಸದಸ್ಯರನ್ನು ಯಾವ ಸಮಿತಿಗೆ ನಿಯೋಜನೆ ಮಾಡಬೇಕು ಎಂಬುದನ್ನು ಬಿಜೆಪಿ ಫೈನಲ್ ಮಾಡಲಿದೆ.