ಹೈದರಾಬಾದ್: ಮುಖ್ಯಮಂತ್ರಿ ಹಾಗೂ ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರ ಕೊಡಂಗಲ್ ಕ್ಷೇತ್ರದ ಕೊಸ್ಗಿ ಸ್ಥಳದಲ್ಲಿ ನಡೆಸಲಿರುವ ಪ್ರಚಾರ ಸಮಾವೇಶಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ ತೆಲಂಗಾಣ ಕಾಂಗ್ರೆಸ್ ನಾಯಕ ಹಾಗೂ ಕೊಡಂಗಲ್ ಕ್ಷೇತ್ರದ ಅಭ್ಯರ್ಥಿ ರೇವಂತ್ ರೆಡ್ಡಿಯನ್ನು ಪೊಲೀಸರು ಇಂದು ಬೆಳಗ್ಗಿನ ಜಾವ ಬಂಧಿಸಿದ್ದಾರೆ.
ರೇವಂತ್ ರೆಡ್ಡಿ ಬಂಧನದಿಂದ ಕೊಡಂಗಲ್ ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆಯಾಗಿ ಪೊಲೀಸರು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ರೆಡ್ಡಿ ಅವರನ್ನು ಬೆಳಗ್ಗೆ ಬಂಧಿಸಿದ ಪೊಲೀಸರು, ಆನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ರೇವಂತ್ ರೆಡ್ಡಿ ಇದೇ ವರ್ಷ ಟಿಆರ್ಎಸ್ ಪಕ್ಷವನ್ನು ತೊರೆದು, ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಮತ್ತು ಕೊಡಂಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಕೆಸಿಆರ್ ಅವರ ಪ್ರಚಾರ ರ್ಯಾಲಿಗೆ ಅಡ್ಡಿಪಡಿಸುವುದಾಗಿ ರೇವಂತ್ ರೆಡ್ಡಿ ಬೆದರಿಕೆಯೊಡ್ಡಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರೆಡ್ಡಿ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿತ್ತು.
ರೆಡ್ಡಿ ಅವರ ಬಂಧನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದೆ.
ರೆಡ್ಡಿ ಪತ್ನಿ ನನಗೆ ಬಂಧನದ ವಿಷಯ ತಿಳಿಸಿದರು. ಪೊಲೀಸರು ಮನೆ ಬಾಗಿಲನ್ನು ಮುರಿದು, ಬಲವಂತವಾಗಿ ಅವರನ್ನು ಕರೆದೊಯ್ದಿದ್ದಾರೆ. ರಾಜಕೀಯಕ್ಕಾಗಿ ಟಿಆರ್ಎಸ್ ಪೊಲೀಸರನ್ನು ಉಪಯೋಗಿಸಿಕೊಳ್ಳಬಾರದು. ರಾಜಕೀಯ ಎದುರಾಳಿಯನ್ನು ಮುಗಿಸಲು ಇದು ಸರಿಯಾದ ದಾರಿಯಲ್ಲ,” ಎಂದು ಕರ್ನಾಟಕ ಸಚಿವ ಡಿ.ಕೆ.ಶಿವಕುಮಾರ್ ಅವರು ರೆಡ್ಡಿ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಪಕ್ಷದ ನಾಯಕ ಮನೀಶ್ ತಿವಾರಿ ಅವರು, ಈ ಘಟನೆಗೆ ಕಾರಣರಾದವರನ್ನು ಚುನಾವಣೆಯಿಂದ ವಜಾಗೊಳಿಸಿ ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.