ಕಟೊವೈಸ್: ಹವಾಮಾನ ಬದಲಾವಣೆ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದು, ಇದರ ವಿರುದ್ದ ಸಮರ ಸಾರಿರುವ ವಿಶ್ವಬ್ಯಾಂಕ್, ಇದಕ್ಕಾಗಿ ತಾನು ನೀಡುತ್ತಿದ್ದ ನೆರವನ್ನು ದುಪ್ಪಟ್ಟುಗೊಳಿಸಿದೆ.
2021-25ರ ಅವಧಿಯ ಹವಾಮಾನ ಹೂಡಿಕೆ ಕ್ರಿಯಾ ಯೋಜನೆಗೆ ವಿಶ್ವಬ್ಯಾಂಕ್ ದುಪ್ಪಟ್ಟು ನೆರವು ಅಂದರೆ, 200 ಶತಕೋಟಿ ಡಾಲರ್ ನೆರವು ಘೋಷಣೆ ಮಾಡಿದೆ.
ಪೋಲಂಡ್ ನಲ್ಲಿ ವಿಶ್ವಸಂಸ್ಥೆ ಹವಾಮಾನ ಶೃಂಗ ಸಭೆ ನಡೆಯುತ್ತಿದ್ದು, ಈ ವೇಳೆ ವಿಶ್ವ ಬ್ಯಾಂಕ್ ದೊಡ್ಡ ಮೊತ್ತದ ನೆರವನ್ನು ಘೋಷಣೆ ಮಾಡಿದೆ.
ಶೃಂಗಸಭೆಯಲ್ಲಿ ಒಟ್ಟು 200 ರಾಷ್ಟ್ರಗಳು ಭಾಗವಹಿಸಿದೆ. ವಿಶ್ವಬ್ಯಾಂಕ್’ನ ಇಷ್ಟು ದೊಡ್ಡ ಮೊತ್ತದ ನೆರವು ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಉತ್ತೇಜನ ನೀಡುವುದು ಮಾತ್ರವೇ ಅಲ್ಲದೆ, ಇಡೀ ವಿಶ್ವ ಇದಕ್ಕೆ ಆದ್ಯತೆ ನೀಡಬೇಕೆಂಬ ಸ್ಪಷ್ಟ ಸಂದೇಶವನ್ನೂ ಸಾರಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ಮಾಡುವ ಒಟ್ಟು ಸರ್ಕಾರಿ ಹಾಗೂ ಖಾಸಗಿ ವೆಚ್ಚವನ್ನು 2020ರೊಳಗಾಗಿ ರೂ.100 ಶತಕೋಟಿ ಹೆಚ್ಚಿಸಲು ನಿರ್ಧರಿಸಿದ್ದು, ಇದು 2016ರಲ್ಲಿ 48.5 ಶತಕೋಟಿ ಹಾಗೂ ಕಳೆದ ವರ್ಷ 56.7 ಶತಕೋಟಿ ಆಗಿದ್ದು ಎಂದು ಇತ್ತೀಚಿನ ಓಇಸಿಡಿ ಅಂಶಗಳಿಂದ ತಿಳಿದುಬಂದಿದೆ.
ದಕ್ಷಿಣ ಧ್ರುವದ ದೇಶಗಳು ಹವಾಮಾನ ಬದಲಾವಣೆ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಸಮರ ಇದೀಗ ಉತ್ತರ ಧ್ರುವದ ರಾಷ್ಟ್ರಗಳೂ ಅನುಸರಿಸುವಂತೆ ಪ್ರೇರೇಪಿಸಿದೆ.
World Bank ups climate funding to $200 billion