ಮುಂದೆ ಶಾಸಕರನ್ನು ಕರೆದೊಯ್ಯುವ ಉದ್ದೇಶದಿಂದ ರೆಸಾರ್ಟ್ ಗೆ ಭೇಟಿ: ಸತೀಶ್ ಜಾರಕಿಹೊಳಿ

ಬೆಳಗಾವಿ: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ರೆಸಾರ್ಟ್ ಗೆ ಭೇಟಿ ನೀಡಿದ್ದು ನಿಜ. ಮುಂದಿನ ದಿನಗಳಲ್ಲಿ ನಮ್ಮ ಶಾಸಕರನ್ನು ಕರೆದ್ಯೊಯವ ಉದ್ದೇಶದಿಂದ ಭೇಟಿ ನೀಡಲಾಗಿತ್ತು ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅಪರೇಷನ್ ಕಮಲದ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಕ್ಷದ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ಸಾಮಾನ್ಯ. ಇದು ಎಲ್ಲಾ ಮುಖ್ಯಮಂತ್ರಿಗಳ ಸಮಯದಲ್ಲೂ ಇರುತ್ತದೆ ಅಷ್ಟೇ. ಆದರೆ ಸಿದ್ದರಾಮಯ್ಯ ಅವರ ಮೇಲೆ ಹೈಕಮಾಂಡ್ ಗೆ ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಇದೇ ವೇಳೆ ಬೆಳಗಾವಿಯ ಸಾತೇರಿ ರೆಸಾರ್ಟ್ ಭೇಟಿ ಮಾಡಿ ಪರಿಶೀಲನೆ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸ್ನೇಹಿತ ಮಗನ ಮದುವೆಗೆ ಭೇಟಿ ನೀಡಿದ್ದೆ. ಈ ವೇಳೆ ಬೆಳಗಾವಿಯ ಸಾತೇರಿ ರೆಸಾರ್ಟ್ ಗೂ ಕೂಡ ಹೋಗಿದ್ದೆ. ಮುಂದೇ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಲು ನೆರವಾಗಲಿದೆ. ಮುಂದೆ ಶಾಸಕರನ್ನು ಟೂರ್ ಮಾಡಲಿಕ್ಕೆ ರೆಸಾರ್ಟ್ ನೋಡಿಕೊಂಡು ಬಂದಿದ್ದೆನೆ ವಿನಾಃ ಪಕ್ಷಾಂತರ ಮಾಡಲು ಕರೆದುಕೊಂಡು ಹೋಗುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

ನಾನು ಯಾವುದೇ ಆತೃಪ್ತರ ಸಂಪರ್ಕದಲ್ಲಿ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಅವರಿಗೆ ತಿಳಿಸಿದ್ದೇವೆ. ಸಂಪುಟ ವಿಸ್ತರಣೆ ಮಾಡಿದರೆ ಒಳ್ಳೇಯದು. ಶೀಘ್ರವೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದರಿಂದ ಸರ್ಕಾರದ ಆಡಳಿತ ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಕೆಲ ದಿನಗಳಿಂದ ಸತೀಶ್ ಜಾರಕಿಹೊಳಿ ಅವರ ಸಹೋದರ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಕಳೆದ ಕೆಲ ದಿನಗಳಿಂದ ಮಾಧ್ಯಮಗಳಿಂದ ದೂರವೇ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಜಾರಕಿಹೊಳಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದ್ದು, ಪಕ್ಷಾಂತರದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬ ಅಂಶ ಬೆಳಗಾವಿ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

               

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ