ನವದೆಹಲಿ: ನೀರಿನ ವಿಚಾರದಲ್ಲಿ ಕರ್ನಾಟಕದೊಂದಿಗಿನ ತಮಿಳುನಾಡು ತಕರಾರು ಮುಂದುವರೆದಿದೆ. ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲೂ ತಮಿಳುನಾಡು ಮೇಕೆದಾಟು ಯೋಜನೆಗೆ ಅನುಮತಿ ನೀಡಿರುವುದನ್ನು ಖಂಡಿಸಿ, ಯೋಜನೆ ತಡೆಗೆ ಆಗ್ರಹಿಸಿದೆ.
ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ಸೋಮವಾರ ಪ್ರಾಧಿಕಾರದ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನಡೆಯಿತು. ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ತಮಿಳುನಾಡು ವಿರೋಧ ವ್ಯಕ್ತಪಡಿಸಿತು.
ನದಿ ಪಾತ್ರದ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಾರೊಂದಿಗೂ ಚರ್ಚಿಸದೆ ಜಲ ಆಯೋಗ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದೆ. ಮೇಕೆದಾಟು ಯೋಜನೆಗೆ ನಾವು ಸಮ್ಮತಿ ಸೂಚಿಸುವುದಿಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡು ಜಲಾಶಯಕ್ಕೆ ನೀರಿನ ಕೊರತೆ ಉಂಟಾಗಲಿದೆ. ಇದೇ ವಿಚಾರವಾಗಿ ಪ್ರಧಾನ ಮಂತ್ರಿಗೂ ಪತ್ರ ಬರೆಯಲಾಗಿದೆ. ಒಪ್ಪಿಗೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಮಾಡಲಾಗಿದೆ. ಪ್ರಾಧಿಕಾರವು ಜಲ ಆಯೋಗಕ್ಕೆ ಒಪ್ಪಿಗೆ ಹಿಂಪಡೆಯಲು ಸೂಚಿಸಬೇಕು ಎಂದು ಆಗ್ರಹಿಸಿತು.