ಬೆಂಗಳೂರು, ಡಿ.2-ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ರಾಜಾಜಿನಗರ ಇಎಸ್‍ಐ ಆಸ್ಪತ್ರೆ ಹೌಸ್ ಕೀಪಿಂಗ್ ಗುತ್ತಿಗೆ ಸಂಸ್ಥೆ ವಿರುದ್ಧ ಕಾರ್ಮಿಕರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಸುಮಾರು 240ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ನಿನ್ನೆ ಬೆಳಗ್ಗೆಯಿಂದ ಇಎಸ್‍ಐ ಆಸ್ಪತ್ರೆ ಮುಂಭಾಗ ಗುತ್ತಿಗೆ ಪಡೆದಿರುವ ಗ್ಲೋಬಲ್ ಮ್ಯಾನೇಜ್‍ಮೆಂಟ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಗ್ಲೋಬಲ್ ಮ್ಯಾನೇಜ್‍ಮೆಂಟ್ ಸಂಸ್ಥೆ ರಾಜಾಜಿನಗರ ಇಎಸ್‍ಐ ಆಸ್ಪತ್ರೆಗೆ ಹೌಸ್ ಕೀಪಿಂಗ್ ಸಿಬ್ಬಂದಿ ನೇಮಕ ಮಾಡಲು ಗುತ್ತಿಗೆ ಪಡೆದಿದೆ.
ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿ ಹೊಸದಾಗಿ ಅರ್ಜಿ ಸಲ್ಲಿಸಿ ಕೆಲಸಕ್ಕೆ ಬರುವಂತೆ ಆದೇಶ ಹೊರಡಿಸಿರುವ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಅವೈಜ್ಞಾನಿಕ ನೀತಿ-ನಿಯಮಗಳನ್ನು ತಂದಿರುವ ಹೊಸ ಅರ್ಜಿಗಳಿಗೆ ಸಹಿ ಸಂಗ್ರಹದ ವಿರುದ್ಧ ಘೋಷಣೆ ಕೂಗಿ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದಾರೆ.
ಮುಂಜಾನೆ ಕೆಲಸಕ್ಕೆ ಬಂದ ಹೌಸ್ ಕೀಪಿಂಗ್ ಕಾರ್ಮಿಕರಿಗೆ ಯಾರಿಗೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಂಸ್ಥೆಗೆ ಹೊಸದಾಗಿ ಅರ್ಜಿ ಸಲ್ಲಿಸಿರುವ 40 ಮಂದಿ ಸಿಬ್ಬಂದಿಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡಲಾಗಿದೆ.ಪ್ರತಿಭಟನೆ ನಡೆಸುತ್ತಿರುವ ಹಲವು ಮಂದಿ ಹಸಿವಿನಿಂದ ಸುಸ್ತಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ರಾಜಾಜಿನಗರ ಪೆÇಲೀಸ್ ಸಿಬ್ಬಂದಿ ಆಗಮಿಸಿ ಗುತ್ತಿಗೆ ಪಡೆದ ಸಂಸ್ಥೆ ನಿರ್ದೇಶಕರಾದ ತಾರಾನಾಥ್ ಅವರನ್ನು ಸ್ಥಳಕ್ಕೆ ಕರೆಯಿಸಿ, ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆ ಮನವೊಲಿಸಿದರು.
ಅವರು ಒಪ್ಪಿಗೆ ಸೂಚಿಸಿದ ನಂತರ ಕಾರ್ಮಿಕರು ತಡರಾತ್ರಿಯಿಂದ ಕೆಲಸ ಪ್ರಾರಂಭಿಸಿದ್ದಾರೆ.