ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತುಮಕೂರು, ಕೊಪ್ಪಳ್ಳ, ಬಳ್ಳಾರಿ, ಮಂಗಳೂರು, ಕೋಲಾರ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಬೆಳಂಬೆಳಿಗ್ಗೆಯೇ ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿನ ತಂಡ ದಾಳಿ ನಡೆಸಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ತಿಪಟೂರಿನ ವಿದ್ಯಾನಗರದ ನಿವಾಸ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದೆ.
ಚಿಕ್ಕನಾಯಕಹಳ್ಳಿ ತಾಲೂಕು ಆಗನಹಳ್ಳಿ ನಿವಾಸಿಯಾದ ಶಿವಕುಮಾರ್ ಕಚೇರಿ ಮತ್ತು ನಿವಾಸಗಳ ಮೇಳೆ ದಾಳಿಯಾಗಿದೆ. ಇವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿತ್ತು.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಿಪಂ ವಿಭಾಗೀಯ ಕಚೇರಿಯ ಎಇಇ ವಿಜಯ್ ಕುಮಾರ್ ನಿವಾಸ ಹಾಗೂ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿದೆ. ಗಂಗಾವತಿಯಲ್ಲಿನ ಜಯನಗರದಲ್ಲಿರುವ ಅವರ ನಿವಾಸದಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿದೆ.
ಮಂಗಳೂರಿನ ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್ ಮತ್ತು ಅವರ ಕಾರು ಚಾಲಕನ ನಿವಾಸದ ಮೇಲೂ ದಾಳಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಪ್ಪರೆಡ್ಡಿ ಅವರ ಮನೆ ಸೇರಿದಂತೆ ಐದು ಕಡೆ ದಾಳಿ ನಡೆಸಲಾಗಿದ್ದು, ಇನ್ನು ಬೆಳಗಾವಿ ಕೃಷ್ಣಾ ಮೇಲ್ದಂಡೆ ವಿಶೇಷ ಭೂಸ್ವಾಧೀನಾಧಿಕಾರಿ ರಾಜೇಶ್ವರಿ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಶೋಧ ಕಾರ್ಯ ನಡೆಸಲಾಗಿದೆ.
ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.