ಬೆಂಗಳೂರು, ನ.30-ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡುಜಗಳ ಮಾಡುವುದು ಬೇಡ ಎಂದು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೇಕೆದಾಟು ಯೋಜನೆಯ ರೂಪುರೇಷೆ ಹೇಗಿರುತ್ತದೆ ಎಂಬ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮಾಹಿತಿ ನೀಡಲು ಸಿದ್ಧ. ಆದರೆ ಅವರು ಸುಮ್ಮನೆ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕ ಹಾಗೂ ತಮಿಳುನಾಡು ಒಳಗೊಂಡಂತೆ ಕೇಂದ್ರ ಸರ್ಕಾರ ಸಭೆ ಕರೆದು ಚರ್ಚಿಸಲಿ.ಈ ಯೋಜನೆಯಿಂದ ನಮಗಿಂತ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ ಎಂದರು.
ಕಾವೇರಿ ನ್ಯಾಯಮಂಡಳಿ ಆದೇಶವನ್ನೂ ನಾವು ಪಾಲಿಸುತ್ತೇವೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಳಕೆಗೆ ನಾವು ಡ್ಯಾಂ ಕಟ್ಟಲು ಉದ್ದೇಶಿಸಿದ್ದೇವೆ. ಆದರೆ ತಮಿಳುನಾಡು ಮೇಕೆದಾಟು ವಿಚಾರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಮಾಹಿತಿ ಬಂದಿದೆ.ನಾವು ನಮ್ಮ ರಾಜ್ಯದ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಡಿ.6 ರಂದು ನೀರಾವರಿ ತಜ್ಞರು, ಮಾಜಿ ನೀರಾವರಿ ಸಚಿವರವನ್ನೊಳಗೊಂಡ ಸಭೆ ಕರೆದಿದ್ದು, ಮೇಕೆದಾಟು ಯೋಜನೆ ಆಗುಹೋಗುಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಚಿವ ರಮೇಶ್ಜಾರಕಿ ಹೊಳಿ ನಿಮ್ಮ ಮೇಲೆ ಮಾತಿನ ದಾಳಿ ನಡೆಸಿದ್ದರಲ್ಲ ಎಂಬ ವರದಿಗಾರರ ಪ್ರಶ್ನೆಗೆ, ನಮ್ಮ ಮೇಲೆ ಯಾರೂ ಬೇಕಾದರೂ ವಾಗ್ದಾಳಿ ಮಾಡಲಿ.ಅವರು ರಾಯಲ್ ಕಾಂಗ್ರೆಸ್ಸಿಗರು ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ಇದೇ ವೇಳೆ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ.ಸರ್ಕಾರ ಕೆಲಸ ಮಾಡಲು ಎಲ್ಲರೂ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.